ನ್ಯಾಯಾಂಗ ನಿಂದನೆಯನ್ನು ಕ್ರಿಮಿನಲ್ ಅಪರಾಧ ಆಗಿಸುವ ಕಾನೂನುಗಳನ್ನು ರದ್ದುಗೊಳಿಸಿ: ನ್ಯಾ.ನಾಗಮೋಹನ್ ದಾಸ್

Update: 2021-12-05 16:50 GMT

ಬೆಂಗಳೂರು, ಡಿ.5: ಜನರ ಧ್ವನಿಯನ್ನು ಅಡಗಿಸುವ ಮತ್ತು ನ್ಯಾಯಾಲಯದ ತೀರ್ಪಿನ ವಿಮರ್ಶೆಗೆ ಅಡ್ಡಿ ತರುವ ದೇಶದ್ರೋಹ ಕಾಯ್ದೆ ಮತ್ತು ನ್ಯಾಯಾಂಗ ನಿಂದನೆಯನ್ನು ಕ್ರಿಮಿನಲ್ ಅಪರಾಧವನ್ನಾಗಿಸುವ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಗ್ರಹಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆ ಹೊರತಂದಿರುವ ಪಲ್ಲವಿ ಇಡೂರು ಅವರ 'ಆಗಸ್ಟ್ ಮಾಸದ ರಾಜಕೀಯ ಕಥನ' ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜನರು ಹೋರಾಟಕ್ಕೆ ಇಳಿಯಬಾರದು ಎಂಬ ಉದ್ದೇಶಕ್ಕಾಗಿ ಇಂಗ್ಲೀಷರು ಜಾರಿಗೆ ತಂದಿದ್ದ ಕಾನೂನನ್ನು ಈಗಿನ ಸರಕಾರಗಳು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಬಳಸುತ್ತಿರುವುದು ಬಹಳ ನೋವಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ ಸೇರಿ ಅನೇಕ ವಿಷಯಗಳಲ್ಲಿ ಪ್ರಭುತ್ವವೇ ದೊಡ್ಡ ಕ್ರಿಮಿನಲ್ ಆಗಿದೆ. ಮಾನವ ಹಕ್ಕು, ಮೂಲಭೂತ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರಗಳ ಜೊತೆ ಜೊತೆಗೆ ದೇಶದ್ರೋಹದ ಕಾಯ್ದೆ ಇರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ  ಭಯೋತ್ಪಾದಕರು ಮತ್ತು ದೇಶದ ಹಿತಕ್ಕೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಬಳಸಲು ಇರಬೇಕು. ಆದರೂ ಈ ಕಾಯ್ದೆಯಡಿ ಪ್ರಕರಣ ಬಳಸಲು ಸ್ಪಷ್ಟ ಮಾರ್ಗಸೂಚಿ ರಚಿಸಬೇಕು. ಆದರೆ ದೇಶದ್ರೋಹ ಮತ್ತು ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಪ್ರಕರಣಗಳನ್ನು ಕಿತ್ತುಹಾಕಲು ಜನಾಂದೋಲನ ನಡೆಯಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಯುವ ಚಳವಳಿಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರಕಾರ ಜನರ ಹೋರಾಟಕ್ಕೆ ಕಿವಿಗೊಡುವುದಿಲ್ಲ ಎಂಬ ವಾತಾವರಣ ಇತ್ತು. ಆದರೆ ಇತ್ತೀಚಿಗೆ ರೈತರ ಹೋರಾಟಕ್ಕೆ ಸಿಕ್ಕ ಗೆಲುವು ನಮ್ಮಲ್ಲಿ ಹೋರಾಟದ ಹೊಸ ಹುಮ್ಮಸು ಮೂಡಿಸಿದೆ ಎಂದು ನಾಗಮೋಹನ್‍ದಾಸ್ ಹೇಳಿದರು.

ಎಲ್ಲರು ನೋಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ವಿಭಿನ್ನವಾಗಿ ಮುಂದಿಡುವುದೇ ಕ್ರಿಯಾಶೀಲತೆ. ಇಂತಹ ಕ್ರಿಯಾಶೀಲತೆಯ ಪ್ರಕ್ರಿಯೆಯಲ್ಲಿ ಬೆಂಕಿಯೂ ಬರಬಹುದು, ಬೆಳಕೂ ಬರಬಹುದು. ಜಗತ್ತಿನ ಜನರು ಕತ್ತಲಲ್ಲಿ ಇರುವ ಹೊತ್ತಲ್ಲಿ ಅವರಿಗೆ ಬೆಳಕು ನೀಡುವ ಪುಸ್ತಕಗಳು ಬರಬೇಕಿದೆ. ಪಲ್ಲವಿ ಇಡೂರು ಅವರ ಈ ಕೃತಿ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು, ದೇಶದ ಇಬ್ಭಾಗದ ಸಂದರ್ಭದಲ್ಲಿ ನಾಯಕರುಗಳ ಮಧ್ಯೆ ನಡೆದ ಮಾತುಕತೆಗಳು ಮತ್ತು ದೇಶ ವಿಭಜನೆಯನ್ನು ಆಗಿನ ಕಾಲದ ನಾಯಕರು ನಿರ್ವಹಿಸಿದ ರೀತಿಯ ಬಗ್ಗೆ ಪುಸ್ತಕ ಮಾಹಿತಿ ನೀಡುತ್ತದೆ ಎಂದು ಹೇಳಿದರು.
 
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಳುಹಿಸಿದ್ದ ವಿಡಿಯೋ ಸಂದೇಶವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News