ರಾಜ್ಯದ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ

Update: 2021-12-06 02:24 GMT

ಬೆಂಗಳೂರು: ದೇಶಾದ್ಯಂತ ಒಮೈಕ್ರಾನ್ ಅಲೆಯ ಭೀತಿ ಆವರಿಸಿರುವ ನಡುವೆಯೇ ಕರ್ನಾಟಕದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ರಿವಿವಾರ 39 ದಿನಗಳಲ್ಲೇ ಗರಿಷ್ಠ ಎನಿಸಿದ 456 ಪ್ರಕರಣಗಳು ದಾಖಲಾಗಿವೆ.

ರವಿವಾರ 330 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ರವಿವಾರ ಸಂಜೆ ವೇಳೆಗೆ 7132ಕ್ಕೇರಿದೆ. ಶನಿವಾರ ಈ ಸಂಖ್ಯೆ 7012 ಆಗಿತ್ತು. ಈ ಏರಿಕೆಯು 22 ದಿನಗಳಿಂದ ಕಂಡುಬಂದ ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿ ವ್ಯತಿರಿಕ್ತವಾಗಿರುವುದನ್ನು ಸೂಚಿಸುತ್ತದೆ.

ಕಳೆದ ಒಂದು ವಾರದಲ್ಲಿ 2499 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಕಳೆದ ವಾರ ದಾಖಲಾದ 2001 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 24.8ರಷ್ಟು ಅಧಿಕ ಪ್ರಕರಣಗಳು ಈ ವಾರ ಬೆಳಕಿಗೆ ಬಂದಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 25ರಷ್ಟು ಪ್ರಕರಣಗಳು ಹೆಚ್ಚಿವೆ. ಹಿಂದಿನ ವಾರ 1082 ಪ್ರಕರಣಗಳು ವರದಿಯಾಗಿದ್ದರೆ, ಈ ವಾರ ಪ್ರಕರಣ ಸಂಖ್ಯೆ 1362ಕ್ಕೇರಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯದ ಹಲವು ಜಿಲ್ಲೆಗಳನ್ನು "ಆತಂಕಕಾರಿ ಜಿಲ್ಲೆಗಳು" ಎಂದು ಗುರುತಿಸಿದೆ. ಈ ಸಂಬಂಧ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಶೇಕಡ 152.17ರಷ್ಟು ಪ್ರಕರಣಗಳು ನವೆಂಬರ್ 19ರಿಂದ ಡಿಸೆಂಬರ್ 2ರ ಅವಧಿಯಲ್ಲಿ ಹೆಚ್ಚಿದ್ದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಧಾರವಾಡದಲ್ಲಿ (20.92%), ಬೆಂಗಳೂರು ನಗರದಲ್ಲಿ (19.16%), ಮೈಸೂರಿನಲ್ಲಿ 16.49% ಪ್ರಕರಣಗಳು ಹೆಚ್ಚಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News