×
Ad

ಫೆಡರೇಷನ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ ನಿಂದ 'ಕ್ವಿಟ್ ಮೋದಿ' ಅಭಿಯಾನಕ್ಕೆ ಚಾಲನೆ

Update: 2021-12-06 13:09 IST

ರಾಯಚೂರು: ಫೆಡರೇಷನ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ 'ಕ್ವಿಟ್ ಮೋದಿ' ರಾಷ್ಟೀಯ ಅಭಿಯಾನದ ಉದ್ಘಾಟನಾ ಸಮಾರಂಭವನ್ನು ಮುದುಗಲ್ ಪುರಸಭೆ ಕಚೇರಿಯ ಮುಂಭಾಗ ಎಫ್ಐಟಿಯು ಕರ್ನಾಟಕ ರಾಜ್ಯಾಧ್ಯಕ್ಷ  ಸುಲೈಮಾನ್ ಕಲ್ಲರ್ಪೆ ಅಧ್ಯಕ್ಷತೆಯಲ್ಲಿ ನಡೆಯಿತು.

ಎಫ್ಐಟಿಯು ರಾಷ್ಟ್ರೀಯ ಅಧ್ಯಕ್ಷ ರಝಾಕ್ ಪಾಲೇರಿಯ ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಎಫ್ಐಟಿಯು ರಾಜ್ಯ ಉಪಾಧ್ಯಕ್ಷ ಎಂ.ದಿವಾಕರ್ ರಾವ್ ಬೋಳೂರು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ  ಇದರ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕೆ, ಎಫ್ಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಅಬ್ದುಲ್ ರಹಿಮಾನ್, ರಾಷ್ಟ್ರೀಯ ಕೋಶಾಧಿಕಾರಿ ಅಡ್ವೋಕೇಟ್ ಅಬ್ದುಲ್ ಸಲಾಂ, ಎಫ್ಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾ ನಾಯಕ್ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಯಚೂರು ಜಿಲ್ಲಾ ಅಧ್ಯಕ್ಷ ಶೇಕ್ ಫರೀದ್ ಉಮರಿ ಹಾಗು ಇತರರು ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುಲೈಮಾನ್ ಕಲ್ಲರ್ಪೆ, ಕಾರ್ಮಿಕರಿಗೆ ನ್ಯಾಯ ನೀಡದ ಕೇಂದ್ರ ಸರಕಾರ, ಇನ್ನೂ ಬಯಲು ಶೌಚಾಲಯವನ್ನೇ ಆಶ್ರಯಿಸಿರುವ ನಮ್ಮ ದೇಶದಲ್ಲಿ ಮೂರು ಸಾವಿರ ಕೋಟಯಷ್ಟು ವೆಚ್ಚದ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರಕಾರದಲ್ಲಿ ಹಣವಿದೆ ಎಂದು ಹೇಳಿದರು.

ಅಡ್ವೋಕೇಟ್ ತಾಹಿರ್ ಹುಸೇನ್ ಮಾತನಾಡಿ ನಮ್ಮ ಪಕ್ಷವು ಯಾವುದೇ ಒಂದು ನಿರ್ದಿಷ್ಟ ವ್ಯಕ್ತಿಯ ಅಥವಾ  ರಾಜಕೀಯ ಪಕ್ಷದ ವಿರೋಧಿಯಲ್ಲ ಬದಲಾಗಿ ಅವುಗಳ ಸೈದ್ಧಾಂತಿಕ ತಳಹದಿಯಲ್ಲಿ ಮತ್ತು ಅದರ ಪ್ರಜಾ ಪ್ರಭುತ್ವ ವಿರೋಧಿ ಧೋರಣೆಗಳನ್ನು ಮಾತ್ರ ವಿರೋಧಿಸುತ್ತೇವೆ. ಪ್ರಸಕ್ತ ಸರಕಾರ ಜನಸಾಮಾನ್ಯರ, ಪ್ರಜಾ ಸರಕಾರವಾಗಿ ಉಳಿದಿಲ್ಲ ಬದಲಾಗಿ, ಕೇವಲ ಅಂಬಾನಿ, ಅದಾನಿಗಳನ್ನು ಸಲಹುವ ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿದೆ ಎಂದು ಆರೋಪಿಸಿದರು. ವೆಲ್ಫೇರ್ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಮಾತ್ರ ಪ್ರತಿನಿಧಿಸುತ್ತಿದ್ದು ನಾವು  ಆಡಳಿತಾತ್ಮಕವಾದ ಯಾವುದೇ ತಪ್ಪುಗಳು ಯಾರಲ್ಲಿ ಕಂಡರೂ ಪ್ರತಿಭಟಿಸಿ ಎದುರಿಸಲಿದ್ದೇವೆ ಎಂದರು.

ರಝಾಕ್ ಪಾಲೇರಿಯವರು ಈ ಸಂದರ್ಭ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದ ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಉದ್ಘಾಟನಾ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಹೇಳಿದರು.

ಎಫ್ಐಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಾ ನಾಯಕ್ ವಂದಿಸಿದರು. ಇದೇ ಸಂದರ್ಭ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಾನೂರ್ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಹಬೀಬ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮೊದಲು ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರನ್ನೊಳಗೊಂಡ ಸಭಿಕರು ರ್ಯಾಲಿಯೊಂದಿಗೆ ಸಭಾಂಗಣಕ್ಕೆ ಆಗಮಿಸಿದರು. ಅಲ್ಲದೆ ಕಲಾವಿದರಾದ ಗಂಗಾಧರ್ ತಂಡದವರ ಕ್ರಾಂತಿ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News