ನಿರೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ ದೊಡ್ಡ ಸುಳ್ಳುಗಾರರಾಗಿ ಹೊರ ಹೊಮ್ಮುತ್ತಿರುವ ಬೊಮ್ಮಾಯಿ: ಸಿದ್ದರಾಮಯ್ಯ ವಾಗ್ದಾಳಿ

Update: 2021-12-06 09:48 GMT

ಬಾದಾಮಿ: ''ಬಸವರಾಜ ಬೊಮ್ಮಾಯಿಯವರ ಬಗ್ಗೆ ನನಗೆ ಕೆಲವು ನಿರೀಕ್ಷೆಗಳಿದ್ದವು. ಆದರೆ ನಮ್ಮ ನಿರೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ ಬಿಜೆಪಿಯ ಬಹಳ ದೊಡ್ಡ ಸುಳ್ಳುಗಾರರಾಗಿ ಹೊರ ಹೊಮ್ಮುತ್ತಿರುವುದನ್ನು ನೋಡಿದರೆ, ಬೊಮ್ಮಾಯಿಯವರು ಕೆಲವೆ ದಿನಗಳಲ್ಲಿ ಜನರಿಂದ ಗೇಲಿಗೆ ಒಳಗಾಗುತ್ತಾರೆ ಎನ್ನಿಸುತ್ತಿದೆ'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಜೊತೆ ಬೆಳೆದ ಮನುಷ್ಯ. ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡ ಮನುಷ್ಯರಲ್ಲ. ನಿಜ ಮತ್ತು ನೈತಿಕತೆಯ ಆಧಾರದ ಮೇಲೆ ಆಡಳಿತ ನಡೆಸಬಹುದು,  ನಮ್ಮ ಸರ್ಕಾರದ ಅವಧಿ ಮುಗಿದಾಗ ಅಭಿವೃದ್ಧಿ ಕೆಲಸಗಳು ಯಾವ ಹಂತದಲ್ಲಿದ್ದವೋ ಅಲ್ಲಿಂದ ಮುಂದಕ್ಕೆ ಕೊಂಡೊಯ್ಯುವ ಕಾಳಜಿಯನ್ನು ಬೊಮ್ಮಾಯಿಯವರು ತೋರಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಬೊಮ್ಮಾಯಿಯವರು ನಿನ್ನೆ ಆನೇಕಲ್ ಮತ್ತು ಬೀದರ್‌ಗಳಲ್ಲಿ ಹಲವಾರು ಸುಳ್ಳುಗಳನ್ನು ಹೇಳಿದ್ದಾರೆ. ಸುಳ್ಳು ಹೇಳುವುದರ ಮೂಲಕ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನವರು ಮನೆಗಳನ್ನೆ ನೀಡಿರಲಿಲ್ಲ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. 2017 ರಲ್ಲಿ ಚುನಾವಣೆಗಳು  ಮೂರು ತಿಂಗಳು ಇರುವಾಗ 1 ಲಕ್ಷ ಮನೆಗಳನ್ನು ಘೋಷಿಸಿದರು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರಿಗೆ ಮಾಹಿತಿ ಪಡೆದುಕೊಳ್ಳುವುದು ಕಷ್ಟವಲ್ಲ. ಮಾಹಿತಿ ಇದ್ದರೂ ಸುಳ್ಳು ಹೇಳುವುದು ತಪ್ಪು.  ಬೊಮ್ಮಾಯಿಯವರು ಹೇಳುತ್ತಿರುವ ಒಂದು ಲಕ್ಷ ಮನೆಗಳು ಬೆಂಗಳೂರಿನ ವಸತಿ ಯೋಜನೆಗೆ ಮಾತ್ರ ಸಂಬಂಧಿಸಿದ್ದು ಎಂದು ತಿಳಿಸಿದ್ದರು. 

ನಾವು ಅಧಿಕಾರಕ್ಕೆ ಬಂದಿದ್ದರೆ ಆ ಯೋಜನೆಯನ್ನು ಪೂರ್ಣಗೊಳಿಸಿ  ಮತ್ತೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೆವು. ಮುಂದೆ ಅಧಿಕಾರಕ್ಕೆ ಬಂದು ಅದನ್ನು ಮಾಡಿಯೇ ತೀರುತ್ತೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಆ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ದೂರಿದರು. 

2013 ರಿಂದ 2018 ರ ಮಾರ್ಚ್ ವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 15 ಲಕ್ಷ ಮನೆಗಳನ್ನು 16775.52 ಕೋಟಿರೂಗಳ  ವೆಚ್ಚದಲ್ಲಿ ಜನರಿಗಾಗಿ ನಿರ್ಮಾಣ ಮಾಡಿಕೊಟ್ಟಿದ್ದೆವು. ಈ ಮಾಹಿತಿಯನ್ನು ವಸತಿ ಸಚಿವ ಸೋಮಣ್ಣನವರ ಕಛೇರಿಯಿಂದಲೆ ನನಗೆ ಲಿಖಿತವಾಗಿ ಕಳಿಸಿದ್ದಾರೆ. ಮಾಹಿತಿ ಇಲ್ಲದಿದ್ದರೆ ಬೊಮ್ಮಾಯಿಯವರು ಸೋಮಣ್ಣನವರನ್ನು ಕೇಳಿ ಪಡೆದುಕೊಳ್ಳಲಿ ಎಂದರು. 

ನಾವು ಹಾಕಿಕೊಂಡಿದ್ದ ಗುರಿ ಮೀರಿ ಸಾಧನೆ ಮಾಡಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗುತ್ತಿವೆ. ಇದುವರೆಗೂ ಕೂಡ  ಪಂಚಾಯಿತಿಗಳಿಗೆ ಮನೆ ನಿರ್ಮಿಸಲು ಹೊಸ ಗುರಿಗಳನ್ನು ನೀಡಿ ಅದನ್ನು ಅನುಷ್ಟಾನ ಮಾಡಿಲ್ಲ ಎಂದು ಟೀಕಿಸಿದರು.

ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಬೀದರ್‌ನಲ್ಲಿ ಬಸವಣ್ಣನವರ ಕರ್ಮಭೂಮಿಯಲ್ಲಿ ನಿಂತು ಸುಳ್ಳು ಹೇಳಿ ಬಸವತತ್ವಕ್ಕೆ ಅಪಚಾರ ಮಾಡಿದ್ದಾರೆ. ಕಾಂಗ್ರೆಸ್‌ನವರು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಖಾಲಿ ಇದ್ದ  ಸರ್ಕಾರಿ ಹುದ್ದೆಗಳನ್ನು ತುಂಬಿಲ್ಲ ಎಂದು ಹೇಳಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 32 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಬಿಜೆಪಿಯದ್ದೇ ಇನ್ನೂ ಶೂನ್ಯ ಸಾಧನೆ ಎಂದು ಟೀಕಿಸಿದರು. 

ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಪಂಚಾಯತಿಗಳ ಕಡೆಗೆ ತಿರುಗಿ ನೋಡಿರಲಿಲ್ಲ ಎಂದಿದ್ದಾರೆ.  ನಾನು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮ ವಿಕಾಸ ಮತ್ತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಜಾರಿಗೆ ತಂದೆವು. ಆ ಯೋಜನೆಯಡಿ 1750 ಕೋಟಿ ರೂಪಾಯಿಗಳನ್ನು ನೀಡಿ 2000 ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದ್ದೆವು. ಪ್ರತಿ ಗ್ರಾಮಕ್ಕೆ ತಲಾ ಒಂದೊಂದು ಕೋಟಿರೂಗಳನ್ನು  ನೀಡಿದ್ದೆವು. ಈ ಬಿಜೆಪಿಯವರು ಬಂದ ಮೇಲೆ ಅದಕ್ಕೂ ಕಲ್ಲು ಹಾಕಿ ಯೋಜನೆ ನಿಲ್ಲಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News