ಕೊರೋನ ಭೀತಿ: ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ, ಕಾಲೇಜು ಬಂದ್; ಶಿಕ್ಷಣ ಸಚಿವ ಬಿ.ಸಿ ನಾಗೇಶ್

Update: 2021-12-06 12:58 GMT
ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಬೆಂಗಳೂರು, ಡಿ. 6: ‘ರಾಜ್ಯದಲ್ಲಿ ಕೊರೋನ ಸೋಂಕಿನ ತೀವ್ರತೆ ಹೆಚ್ಚಾದರೆ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳನ್ನು ಮುಚ್ಚಲು ನಾವು ಸಿದ್ಧರಿದ್ದೇವೆ. ಹೀಗಾಗಿ ಯಾವುದೇ ಪೋಷಕರು ಆತಂಕಪಡುವ ಅಗತ್ಯವಿಲ್ಲ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದಿಲ್ಲಿ ಅಭಯ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋವಿಡ್ ರೂಪಾಂತರಿ ಒಮೈಕ್ರಾನ್ ಭೀತಿ ಹಿನ್ನೆಲೆಯಲ್ಲಿ ತಜ್ಞರಿಂದ ಪ್ರತಿದಿನವೂ ವರದಿ ಪಡೆದುಕೊಳ್ಳುತ್ತಿದ್ದೇವೆ. ವರದಿ ಆಧರಿಸಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಒಂದು ವೇಳೆ ಕೋವಿಡ್ ಸೋಂಕು ಹರಡುವ ಪ್ರಮಾಣ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡುವುದಕ್ಕೆ ನಾವು ಸಿದ್ಧ.ಹೀಗಾಗಿ ಪೋಷಕರು ಯಾವುದೇ ರೀತಿಯಲ್ಲಿಯೂ ಆತಂಕ ಪಡುವುದು ಬೇಡ. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿ ಮತ್ತಷ್ಟು ಕಠಿಣ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ವಸತಿ ಹಾಗೂ ನವೋದಯ ಶಾಲೆಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಹೀಗಾಗಿ, ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. 1 ರಿಂದ 10ನೆ ತರಗತಿಗಳಸರಕಾರಿ ಶಾಲೆಗಳಲ್ಲಿ ಸೋಂಕಿಲ್ಲ. ಮಕ್ಕಳಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದೆ. ಯಾವುದೇ ಸಮಸ್ಯೆ, ಆತಂಕ ಇಲ್ಲ ಎಂದರು.

ಮಕ್ಕಳಿಗೆ ಲಸಿಕೆ: ಕೋವಿಡ್ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ಪರೀಕ್ಷೆಗಳಲ್ಲಿ ವ್ಯಕ್ತಿಗತ ಅಂತರ ಕಾಪಾಡಲು ಕ್ರಮ ವಹಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಸ್ವಲ್ಪ ಕೋವಿಡ್ ಹೆಚ್ಚಾಗಬಹುದು. ಆದರೆ, ಆ ವೇಳೆಗೆ ಮಕ್ಕಳಿಗೆ ಲಸಿಕೆ ಬರುವ ನಿರೀಕ್ಷೆ ಹೆಚ್ಚಿದೆ. ಹೀಗಾಗಿ, ಪ್ರತಿ ಕ್ಷಣವೂ ಸರಕಾರ ಗಮನಿಸುತ್ತಿದೆ ಎಂದು ನಾಗೇಶ್ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News