ವಿಧಾನ ಪರಿಷತ್ ಚುನಾವಣೆ: ಸೂರಜ್ ರೇವಣ್ಣ ನಾಮಪತ್ರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Update: 2021-12-06 11:25 GMT

ಬೆಂಗಳೂರು, ಡಿ.6: ವೈವಾಹಿಕ ವಿವರಗಳನ್ನು ಮುಚ್ಚಿಟ್ಟು ಹಾಸನ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ಸೂರಜ್ ರೇವಣ್ಣ ಅವರ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಚನ್ನರಾಯಪಟ್ಟಣ ತಾಲೂಕು ಕುಂದೂರು ಗ್ರಾಮದ ನಿವಾಸಿ ಕೆ.ಎಲ್. ಹರೀಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಏಕಸಸದಸ್ಯ ಪೀಠ ಸೋಮವರ ವಿಚಾರಣೆ ನಡೆಸಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಈಗಾಗಲೇ ಚುನಾವಣೆ ಆರಂಭವಾಗಿರುವುದರಿದ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರಿಗೆ ಆಕ್ಷೇಪಣೆಗಳಿದ್ದರೆ ಚುನಾವಣೆ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಮನವಿ ಏನು?: ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಅರ್ಜಿಯಲ್ಲಿ ಪತ್ನಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಲ್ಲ. ಪತ್ನಿಗೆ ಸಂಬಂಧಿಸಿದ ಎಲ್ಲ ಕಾಲಂಗಳಲ್ಲಿ 'ಅನ್ವಯವಾಗುವುದಿಲ್ಲ' ಎಂದು ನಮೂದಿಸಿದ್ದಾರೆ. 

ಅಲ್ಲದೇ ಸೂರಜ್ ರೇವಣ್ಣ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಹೀಗಾಗಿ, ಸೂರಜ್ ನಾಮಪತ್ರವನ್ನು ಅಂಗೀಕರಿಸಿರುವ ಜಿಲ್ಲಾ ಚುನಾವಣಾಧಿಕಾರಿ ಆದೇಶವನ್ನು ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಹಾಗೆಯೇ, ಸೂರಜ್ ರೇವಣ್ಣ ಅವರ ಉಮೇದುವಾರಿಕೆಯನ್ನು ಅನರ್ಹ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದರು. 

ಅಲ್ಲದೇ ಡಿ. 10ರಂದು ನಡೆಯಲಿರುವ ಹಾಸನ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News