ಹ್ಯಾಕರ್ಸ್ ಹಣ ಕದ್ದರೂ ಬ್ಯಾಂಕ್‍ಗಳೇ ನಷ್ಟ ತುಂಬಿಕೊಡಬೇಕು: ಗ್ರಾಹಕ ಕೋರ್ಟ್

Update: 2021-12-06 16:40 GMT

ಬೆಂಗಳೂರು, ಡಿ.6: ಹ್ಯಾಕರ್ ಗಳು ಗ್ರಾಹಕರ ಖಾತೆ ಮೂಲಕ ಹಣವನ್ನು ಕದ್ದರೆ ಆ ನಷ್ಟವನ್ನು ಬ್ಯಾಂಕ್‍ಗಳೇ ತುಂಬಿಕೊಡಬೇಕೆಂದು ಬೆಂಗಳೂರಿನ ಗ್ರಾಹಕ ಕೋರ್ಟ್ ಆದೇಶ ನೀಡಿದೆ. 

 ರಾಷ್ಟ್ರೀಕೃತ ಬ್ಯಾಂಕ್‍ವೊಂದರಲ್ಲಿ ಉಳಿತಾಯ ಖಾತೆ ಹೊಂದಿದ್ದ ಬೆಂಗಳೂರಿನ ಮಹದೇವಪುರದ ನಿವಾಸಿ ಆರ್.ಅಶ್ವಿನಿ ಎಂಬುವವರ ಮೊಬೈಲ್‍ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಒನ್‍ಟೈಮ್ ಪಾಸ್‍ವರ್ಡ್ ಬಂದಿತ್ತು. ಇದಾದ ಸ್ವಲ್ಪ ಸಮಯದಲ್ಲೇ ಸುಮಾರು 50 ಸಾವಿರ ರೂ.ಡೆಬಿಟ್ ಆಗಿರುವ ಮತ್ತೊಂದು ಸಂದೇಶ ಬಂದಿತ್ತು.

ಅಶ್ವಿನಿ ಬ್ಯಾಂಕ್‍ಗೆ ತೆರಳಿ ವಿಚಾರಿಸಿದಾಗ ತಮ್ಮ ಖಾತೆಯಿಂದ ಹಣ ತೆಗೆದಿರುವ ವಿಷಯ ತಿಳಿದು ಬಂದಿತ್ತು. ಎಚ್ಚೆತ್ತ ಅವರು ಕಾರ್ಡ್ ಬ್ಲಾಕ್ ಮಾಡಲು ಹಾಗೂ ತಮ್ಮ ಖಾತೆಯಿಂದ ತೆಗೆಯಲಾಗಿರುವ ಹಣ ಮರುಪಾವತಿಸುವಂತೆ ಬ್ಯಾಂಕ್‍ಗೆ ಮನವಿ ಸಲ್ಲಿಸಿ, ವಿವೇಕನಗರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದರು.

ಇದಾಗಿ 3 ತಿಂಗಳು ಕಳೆದರೂ ಹಣ ಸಿಗದಿದ್ದಾಗ ಅಶ್ವಿನಿ ಮತ್ತೆ ಬ್ಯಾಂಕ್‍ಗೆ ಪತ್ರ ಹಾಗೂ ಮೇಲ್ ಮುಖೇನ್ ಮನವಿ ಮಾಡಿದ್ದರು.
ಕೆಲ ದಿನಗಳ ಬಳಿಕ ಇ-ಮೇಲ್‍ಗೆ ಪ್ರತಿಕ್ರಿಯಿಸಿದ್ದ ಬ್ಯಾಂಕ್ ಆರ್‍ಬಿಐನ ಒಂಬುಡ್ಸ್‍ಮನ್‍ಗೆ ದೂರು ನೀಡಲು ಸಲಹೆ ನೀಡಿತ್ತು. ಆದರೆ ಅಲ್ಲಿಗೆ ದೂರು ಕೊಟ್ಟರೂ ಪ್ರಯೋಜನವಾಗದಿದ್ದಾಗ ಗ್ರಾಹಕ ಕೋರ್ಟ್ ಮೊರೆ ಹೋಗಿದ್ದರು.

ನ್ಯಾಯಪೀಠವು, ಮಹಿಳೆಯೊಬ್ಬರು ಕಳೆದುಕೊಂಡ 50 ಸಾವಿರ ರೂ. ಜತೆಗೆ 20 ಸಾವಿರ ಪರಿಹಾರ ಸೇರಿಸಿ ಕೊಡುವಂತೆ ರಾಷ್ಟ್ರೀಕೃತ ಬ್ಯಾಂಕ್‍ಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News