ನಾನು ಸೋತರೂ ಪರವಾಗಿಲ್ಲ, ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಸೇಡು ತೀರಿಸಿಕೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

Update: 2021-12-06 13:37 GMT

ಯಾದಗಿರಿ, ಡಿ. 6: ‘ಲೋಕಸಭೆ ಚುನಾವಣೆಯಲ್ಲಿ ಯಾದಗಿರಿ ಮತ್ತು ಗುರುಮಿಠಕಲ್ ಜನತೆ ನನ್ನನ್ನು ಕೈಬಿಟ್ಟರು. ಆರೆಸೆಸ್ಸ್ ಜೊತೆ ಸೇರಿ ನನ್ನನ್ನು ಸೋಲಿಸಿದರು. ಆದರೆ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಳ್ಳಬೇಕು' ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಸೋಮವಾರ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಹೇಳಿಕೊಳ್ಳಲು ಏನು ಇಲ್ಲ. ಹೀಗಾಗಿ ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ಒಂದೊಂದಾಗಿ ಕೈಬಿಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತುಹೋಗಿವೆ ಎಂದು ಟೀಕಿಸಿದರು.

ಕೇಂದ್ರ ಸಚಿವನ ಪುತ್ರ ರೈತರ ಮೇಲೆ ಜೀಪ್ ಹತ್ತಿಸಿ ಹಲವು ಮಂದಿಯನ್ನು ಸಾಯಿಸಿದ. ಕೃಷಿ ಕಾಯ್ದೆ ವಾಪಸ್‍ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿಗೆ ಹೋಗಿ ಒಮ್ಮೆಯೂ ಮಾತನಾಡಲಿಲ್ಲ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಚುನಾವಣೆ ಕಾರಣ ಕೃಷಿ ಕಾಯ್ದೆ ಹಿಂಪಡೆದುಕೊಂಡಿದ್ದಾರೆ. 700 ಮಂದಿ ರೈತರು ಪ್ರಾಣ ಕಳೆದುಕೊಂಡರು ಅವರ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಖರ್ಗೆ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News