ಸಚಿವರನ್ನು ಪ್ರಶ್ನಿಸಿದ ವಿಡಿಯೊ ವೈರಲ್: 1 ಗಂಟೆಯಲ್ಲಿ 3 ಠಾಣೆಯಿಂದ ಕರೆ..!

Update: 2021-12-06 14:40 GMT
ಬಿಂದುಗೌಡ 

ಬೆಂಗಳೂರು, ಡಿ.6: ಬಿಜೆಪಿ ನಾಯಕರ ಮೇಲಿರುವ ಅಪರಾಧ ಪ್ರಕರಣಗಳನ್ನು ಬಹಿರಂಗಗೊಳಿಸಿ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕಿ ಬಿಂದುಗೌಡ ತನಗೆ 1 ಗಂಟೆಯಲ್ಲಿ ನಗರದ ಮೂರು ಪೊಲೀಸ್ ಠಾಣೆಗಳಿಂದ ಕರೆ ಬಂದಿದೆ ಎಂದು ಹೇಳಿದ್ದಾರೆ. 

ವಿಧಾನ ಪರಿಷತ್ತಿನ ಚುನಾವಣೆಯ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ವೈ.ಶರೀಫ್ ಕುರಿತು ಇತ್ತೀಚಿಗೆ ಸಚಿವ ಎಸ್.ಟಿ.ಸೋಮಶೇಖರ್ ಟೀಕಿಸಿದ್ದರು.ಇದಾದ ಬಳಿಕ ಬಿಂದುಗೌಡ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಂದನ್ನು ಬಿಡುಗಡೆಗೊಳಿಸಿ ಬಿಜೆಪಿ ನಾಯಕರ ಮೇಲಿರುವ ಅಪರಾಧ ಪ್ರಕರಣಗಳನ್ನು ಬಹಿರಂಗಗೊಳಿಸಿ ಅಥವಾ ಪಟ್ಟಿಯನ್ನು ಜನರ ಮುಂದಿಡಿ ಎಂದು ಸವಾಲು ಹಾಕಿದ್ದರು.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಆದರೆ, ಇದೇ ವಿಚಾರವಾಗಿ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಳಗೋಡು, ತಾವರಕೆರೆ, ಕಗ್ಗಲಿಪುರ ಠಾಣಾ ಪೊಲೀಸರು ಏಕಕಾಲದಲ್ಲಿ ಬಿಂದುಗೌಡಗೆ ಕರೆ ಮಾಡಿ, ಠಾಣೆಗೆ ವಿಚಾರಣೆಗೆ ಬರುವಂತೆ ಬೆದರಿಕೆವೊಡ್ಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಂದುಗೌಡ, ಒಂದೇ ದಿನ, ಒಂದೇ ವಿಚಾರವಾಗಿ ಮೂರು ಠಾಣೆಗಳಿಂದ ಕರೆ ಬಂದಿರುವುದು ಅಚ್ಚರಿತಂದಿದೆ. ಪೊಲೀಸರ ಮೇಲೆ ಯಾರೂ ಒತ್ತಡ ಹೇರುತ್ತಿರುವ ಅನುಮಾನವೂ ಇದೆ. ಅಲ್ಲದೆ, ಸಚಿವ ಕುರಿತು ಯಾವುದೇ ರೀತಿಯ ವ್ಯಯುಕ್ತಿಕ ಟೀಕೆ ಮಾಡಿಲ್ಲ ಎಂದರು.

ಸಚಿವರನ್ನು ಸಂವಿಧಾನಿಕವಾಗಿಯೇ ಪ್ರಶ್ನೆ ಮಾಡಿದ್ದೇನೆ.ಆದರೆ, ವಿಡಿಯೊ ವೈರಲ್ ಆದ ಕಾರಣ, ಪೊಲೀಸರು ಕರೆ ಮಾಡಿ ವಿಚಾರಣೆಗೆ ಬನ್ನಿ, ನೀವು ಸಚಿವರ ಕುರಿತು ಮಾತನಾಡಿದಕ್ಕೆ ದೂರು ಬಂದಿದೆ ಎಂದಿದ್ದಾರೆ. ಆದರೆ, ನನಗೆ ಯಾವುದೇ ರೀತಿಯಲ್ಲಿ ಲಿಖಿತ ರೂಪದಲ್ಲಿ ನೋಟಿಸ್ ನೀಡಿಲ್ಲ.ಹೀಗಾಗಿ,  ಠಾಣೆಗೆ ಹೋಗಿಲ್ಲ. ಒಂದು ವೇಳೆ ದೂರು ದಾಖಲಾಗಿದ್ದರೂ, ಕಾನೂನು ಹೋರಾಟ ನಡೆಸುವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News