ಜನರಿಗೆ ‘ಕೈ’ ಕೊಡುವುದರಲ್ಲಿ ಕಾಂಗ್ರೆಸ್ ಸಿದ್ಧಹಸ್ತ: ಸಿಎಂ ಬೊಮ್ಮಾಯಿ

Update: 2021-12-06 15:01 GMT

ಗದಗ, ಡಿ.6: ಕಾಂಗ್ರೆಸ್ ಪಕ್ಷದ ಚಿಹ್ನೆ ‘ಹಸ್ತ’ವಾಗಿದ್ದು, ಜನರಿಗೆ ಕೈಕೊಡುವ ಕೆಲಸದಲ್ಲಿ ಅವರು ಸಿದ್ಧಹಸ್ತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಸೋಮವಾರ ಗದಗ ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. 

7 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿ ಕೆಲವೇ ದಿನಗಳ ನಂತರ ಅದನ್ನು 4 ಕೆಜಿಗೆ ಇಳಿಸಿದರು. 5 ವರ್ಷದ ಅವಧಿಯಲ್ಲಿ 3 ವರ್ಷ 4ಕೆಜಿ ಅಕ್ಕಿ ಮಾತ್ರ ನೀಡಿದ್ದಾರೆ. ಚುನಾವಣೆಗೆ ಒಂದು ವರ್ಷವಿದ್ದಾಗ ಪುನಃ 7 ಕೆಜಿಗೆ ಏರಿಸಿದರು ಎಂದರು. 

ಕಾಂಗ್ರೆಸ್ ಸರಕಾರ ಮೊದಲು ಆಶ್ವಾಸನೆಗಳನ್ನು ನೀಡಿ ‘ಕೊಡ್ತೀವಿ’ ಅಂತಾರೆ, ನಂತರ ಅವುಗಳನ್ನು ತಾವು ಪೂರೈಸಲಾಗದೇ ‘ಕೊಡಿಸ್ತೀವಿ’ ಎನ್ನುತ್ತಾರೆ, ಕೊನೆಗೆ ತಾವು ಮಾಡಿದ  ಪೊಳ್ಳು ಆಶ್ವಾಸನೆಗಳನ್ನು ಪೂರೈಸಲಾಗದೆ ‘ಕೊಡುವವರನ್ನು ತೋರಿಸ್ತೀವಿ’ ಅನ್ನುವ ಮೂಲಕ ಮುಂಬರುವ ಸರಕಾರವನ್ನು ಬೆರಳು ಮಾಡಿ ತೋರಿಸುತ್ತಾರೆ. ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಜಾಗವನ್ನು ತೋರಿಸಬೇಕು ಎಂದು ಕರೆ ನೀಡಿದರು.

ಮಾತಿನ ಮಂಟಪ ಕಟ್ಟುವ ಕಾಂಗ್ರೆಸ್: ಸಿದ್ದರಾಮಯ್ಯ ಅವರು ಬಿಜೆಪಿಯವರು ಜನರಿಗೆ ಒಂದು ಮನೆಯನ್ನಾದರೂ ಇದುವರೆಗೆ ನೀಡಿದ್ದಾರೆಯೇ ಎಂದು ಆರೋಪಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಚುನಾವಣೆಗೆ ಮೂರು ತಿಂಗಳಿದ್ದ ಸಂದರ್ಭದಲ್ಲಿ 15 ಲಕ್ಷ ಮನೆಗಳನ್ನು ನೀಡುತ್ತೇವೆ ಎಂದು ಘೋಷಣೆ ಮಾಡಿ ಒಂದು ಪೈಸೆಯನ್ನೂ ಯೋಜನೆಗೆ ನೀಡಲಿಲ್ಲ. ಮನೆ ನಿರ್ಮಾಣಕ್ಕೆ ಅನುದಾನ ನೀಡದೇ ಕಾಂಗ್ರೆಸ್ ಅವರು ಮಾತಿನ ಮಂಟಪ ಕಟ್ಟಬಹುದು ಆದರೆ ಜನರಿಗೆ ಮನೆಯನ್ನು ಕಟ್ಟಲು ಸಾಧ್ಯವಿಲ್ಲ. ಬಹುಶಃ ಕಾಂಗ್ರೆಸ್‍ನವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತ್ರಿಯಿಂದಲೇ ಅಂತಹ ಘೋಷಣೆಯನ್ನು ಮಾಡಿದ್ದಿರಬಹುದು ಎಂದರು.

5 ಲಕ್ಷ ಮನೆಗಳ ನಿರ್ಮಾಣ: ವಸತಿ ನಿರ್ಮಾಣ ಯೋಜನೆಗೆ ಸಮ್ಮಿಶ್ರ ಸರಕಾರದಲ್ಲಿ ಸ್ವಲ್ಪ ಅನುದಾನ ಲಭಿಸಿತು ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ಅನುದಾನ ಒದಗಿಸಿ ಮನೆ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. ನನ್ನ ಅವಧಿಯಲ್ಲಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಈ ವಸತಿ ಯೋಜನೆಗಳು ನಮ್ಮ ಅಧಿಕಾರಾವಧಿಯಲ್ಲಿಯೇ ಪೂರ್ಣಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದು ನಮ್ಮ ಪಕ್ಷದ ಬದ್ಧತೆ ಹಾಗೂ ಆದ್ಯತೆ ಎಂದರು.

7500 ಸ್ತ್ರೀ ಶಕ್ತಿ ಸಂಘಕ್ಕೆ 1 ಲಕ್ಷ ರೂ. ಅನುದಾನ ಕೊಡುವ ಯೋಜನೆ, 75000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಸೃಷ್ಟಿ, ಗ್ರಾಮೀಣ ಪ್ರದೇಶದಲ್ಲಿ ಜಾರಿಯಾಗುವ ಯೋಜನೆಗಳು. ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಗೊಳಿಸುವಲ್ಲಿ ಆರೋಗ್ಯಕರ ಪೈಪೋಟಿ ನಮ್ಮ ಸರಕಾರದಲ್ಲಿದೆ ಎಂದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News