ಪಂಚಮಸಾಲಿ ಸಮುದಾಯಕ್ಕೆ ‘ಪ್ರವರ್ಗ-2ಎ' ಮೀಸಲಾತಿ ಅರ್ಹತೆ ಇದೆ: ವಚನಾನಂದ ಸ್ವಾಮಿ

Update: 2021-12-06 16:41 GMT

ಬೆಂಗಳೂರು, ಡಿ. 6: ‘ರಾಜ್ಯದ ಪ್ರಮುಖ ಕೃಷಿಕ ಹಿನ್ನೆಲೆಯ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ಪಡೆಯುವ ಎಲ್ಲ ಅರ್ಹತೆ ಹೊಂದಿದ್ದು, ಆ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು' ಎಂದು ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮಿ, ನಿವೃತ್ತ ನಾಯ್ಯಮೂರ್ತಿ ಸುಭಾಶ್ ಆಡಿ ನೇತೃತ್ವದ ಸಮಿತಿಗೆ ಮನವಿ ಸಲ್ಲಿಸಿದರು.

ಸೋಮವಾರ ವಿಕಾಸಸೌಧದ ಕೊಠಡಿ ಸಂಖ್ಯೆ-7ರಲ್ಲಿ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಅವರ ಮೀಸಲಾತಿ ಪರಿಶೀಲನಾ ಉನ್ನತ ಮಟ್ಟದ ಸಮಿತಿಯ ಮುಂದೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಶ್ರೀಗಳು, ನ್ಯಾ.ಸುಭಾಷ್ ಅಡಿ ಅವರ ಮೀಸಲಾತಿ ಪರಾಮರ್ಶಿಸುವ ಉನ್ನತ ಸಮಿತಿ ನಮ್ಮ ವಾದವನ್ನು ಮಂಡಿಸುವಂತೆ ಆಹ್ವಾನ ನೀಡಿತ್ತು. ಈ ನಿಟ್ಟಿನಲ್ಲಿ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು, ಸಮುದಾಯದ ಹಿರಿಯರು ನೇತೃತ್ವದ ನಿಯೋಗ, ಸಮಿತಿ ಮುಖ್ಯಸ್ಥರನ್ನು ಖುದ್ದು ಭೇಟಿ ಮಾಡಿ ನಮ್ಮ ವಾದ ಮಂಡಿಸಿ ಹಾಗೂ ಸೂಕ್ತ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ ಎಂದರು.

‘ರಾಜ್ಯದಲ್ಲಿನ ಪ್ರಮುಖ ಕೃಷಿಕ ಸಮುದಾಯ ಆಗಿರುವ ಪಂಚಮಸಾಲಿಗಳಿಗೆ ಯಾವುದೇ ಮೀಸಲಾತಿ ಸಿಕ್ಕಿಲ್ಲ. ಲಿಂಗಾಯತ ಸಮುದಾಯದ ಇತರೆ ಉಪಪಂಗಡಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಪ್ರವರ್ಗ 2ಎ ನಲ್ಲಿ ಅಥವಾ ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಅಧಿಕಾರವನ್ನು ಬಳಸಿಕೊಂಡು ಓಬಿಸಿ ಮೀಸಲಾತಿಯನ್ನ ನೀಡಬೇಕು ಎಂದು ಆಗ್ರಹಿಸಿದರು. 

ಹಿರಿಯ ವಕೀಲ ಬಿ.ಎಸ್.ಪಾಟೀಲ್ ಮಾತನಾಡಿ, 1871ರಿಂದ ಇಲ್ಲಿಯವರೆಗಿನ ಸುಮಾರು 35ಕ್ಕೂ ಹೆಚ್ಚು ದಾಖಲೆಗಳನ್ನು ನಾವು ಸಮಿತಿಗೆ ನೀಡಿದ್ದೇವೆ. ಹಲವು ದಶಕಗಳ ಬೇಡಿಕೆಯ ಫಲವಾಗಿ ಸರಕಾರ ಸಮಿತಿ ರಚನೆ ಮಾಡಿದೆ. ಅಲ್ಲದೆ, ಕೇಂದ್ರ ಸರಕಾರದ ಓಬಿಸಿ ಪಟ್ಟಿಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವಂತೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಕೇಂದ್ರ ಸಂವಿಧಾನಕ್ಕೆ ತಿದ್ದುಪಡಿ ತಂದು ಓಬಿಸಿ ಪಟ್ಟಿಗೆ ಸೇರ್ಪಡೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಅರ್ಜಿಗಳು ರಾಜ್ಯಸರಕಾರಕ್ಕೆ ವರ್ಗಾವಣೆ ಆಗಿದ್ದು ಓಬಿಸಿ ಮೀಸಲಾತಿ ಸಿಗುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News