ಕರ್ನಾಟಕ ಪಂಚಾಯತ್‍ರಾಜ್ ಸೀಮಾ ನಿರ್ಣಯ ಆಯೋಗ ರಚನೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-12-06 16:44 GMT

ಬೆಂಗಳೂರು, ಡಿ.6: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಜಾರಿಗೆ  ತಂದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.

ಜನಗಣತಿ ಆಧಾರದ ಮೇಲೆ ಪ್ರತಿಯೊಂದು ಗ್ರಾಪಂ, ತಾಪಂ ಮತ್ತು ಜಿಪಂಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಆಯೋಗ ಶಿಫಾರಸು ಮಾಡಲಿದೆ. 

ಜತೆಗೆ ವಾರ್ಡ್ ಅಥವಾ ಕ್ಷೇತ್ರಗಳನ್ನಾಗಿ ವಿಂಗಡಿಸಲೂ ಶಿಫಾರಸು ಮಾಡುವುದು. ಪ್ರತಿಯೊಂದು ಗ್ರಾಪಂ ಅಥವಾ ತಾಪಂ ಅಥವಾ ಜಿಪಂ ವಾರ್ಡ್‍ಗಳ ಅಥವಾ ಕ್ಷೇತ್ರ ಗಡಿಗಳನ್ನು ನಿರ್ಧರಿಸುವುದಕ್ಕಾಗಿ ಶಿಫಾರಸುಗಳನ್ನು ಮಾಡಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 
ಈ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿಯ ಕಾನೂನು ಬದ್ಧತೆ ಪ್ರಶ್ನಿಸಿ ರಾಜ್ಯ ಚುನಾವಣೆ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. 
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News