ನಾಗರಿಕರನ್ನು ಕೊಲ್ಲುವ ಸೇನೆಯ ವಿಶೇಷಾಧಿಕಾರ ರದ್ದಾಗಲಿ

Update: 2021-12-07 04:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳ ದೌರ್ಜನ್ಯಕ್ಕೆ ಕೊನೆಯೆಂಬುದೇ ಇಲ್ಲದಂತಾಗಿದೆ. ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಓಟಿಂಗ್ ಎಂಬ ಗ್ರಾಮಗಳಲ್ಲಿ ಭದ್ರತಾ ಪಡೆಗಳ ಸಿಬ್ಬಂದಿ 14 ಮಂದಿ ಅಮಾಯಕರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಹನ್ನೊಂದು ಮಂದಿ ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಟಿರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳು ನಾಗರಿಕರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಕಲ್ಪಿಸಿಕೊಂಡು ಈ ರೀತಿ ಹತ್ಯಾಕಾಂಡ ನಡೆಸಿವೆ.ಇದು ಭದ್ರತಾ ಪಡೆಗಳು ನಡೆಸಿರುವ ಅತ್ಯಂತ ಬರ್ಬರ ದುಷ್ಕೃತ್ಯ ಎಂದು ಕರೆದರೆ ತಪ್ಪಿಲ್ಲ.

ಟಿರು ಪ್ರದೇಶದಲ್ಲಿ ಶನಿವಾರ ಸಂಜೆ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳು ಮೊದಲು ನಾಗರಿಕರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಎಂಟು ಮಂದಿ ಅಮಾಯಕ ನಾಗರಿಕರು ಕೊಲ್ಲಲ್ಪಟ್ಟರು. ಕತ್ತಲಾದರೂ ತಮ್ಮ ಊರಿನವರು ಮನೆಗೆ ಬರದಿರುವುದರಿಂದ ಗಾಬರಿಗೊಂಡು ಅವರ ಹಳ್ಳಿಯವರು ಅವರನ್ನು ಹುಡುಕಿಕೊಂಡು ಘಟನೆ ನಡೆದ ಸ್ಥಳಕ್ಕೆ ಹೋದರು. ಆಗ ಈ ಮುಗ್ಧ ನಾಗರಿಕರ ಮೇಲೂ ಭದ್ರತಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಮತ್ತೆ ಐವರು ನಾಗರಿಕರನ್ನು ಕೊಂದರು. ಇದರಿಂದ ಉದ್ರಿಕ್ತರಾದ ಸುತ್ತಮುತ್ತಲಿನ ಗ್ರಾಮಸ್ಥರು ಅಸ್ಸಾಂ ರೈಫಲ್ಸ್ ಸೇನಾ ಶಿಬಿರದ ಎದುರು ಪ್ರತಿಭಟನೆ ನಡೆಸಿದ್ದಾರೆ. ಆಗ ಮತ್ತೆ ಸೈನಿಕರು ಗುಂಡು ಹಾರಿಸಿದ ಪರಿಣಾಮವಾಗಿ ಮತ್ತೊಬ್ಬ ನಾಗರಿಕ ಸಾವಿಗೀಡಾಗಿದ್ದಾನೆ. ಇದು ಉಗ್ರರ ದಮನದ ಹೆಸರಿನಲ್ಲಿ ನಡೆದ ಅಮಾಯಕ ನಾಗರಿಕರ ಕಗ್ಗೊಲೆ ಅಲ್ಲದೆ ಬೇರೇನೂ ಅಲ್ಲ.

ನಾಗಾಲ್ಯಾಂಡ್‌ನಲ್ಲಿ ಭದ್ರತಾ ಪಡೆಗಳು ಅಮಾಯಕ ನಾಗರಿಕರ ಮೇಲೆ ಮಾಡಿರುವ ಗುಂಡಿನ ದಾಳಿ ಅತ್ಯಂತ ಘೋರ ಅಪರಾಧವಾಗಿದೆ. ಇದೊಂದು ಯುದ್ಧಾಪರಾಧ. ತಾನು ಮಾಡುವ ಎಲ್ಲ ಪೈಶಾಚಿಕ ಕೃತ್ಯಗಳಿಗೆ ಗುಪ್ತಚರ ದಳದ ಲೋಪ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ ಬಂದ ಭದ್ರತಾ ಪಡೆಗಳು ಪದೇ ಪದೇ ಇಂತಹ ಕಗ್ಗೊಲೆಗಳನ್ನು ಮಾಡುತ್ತಲೇ ಇವೆ. ನಿರಾಯುಧರಾದ ಅಮಾಯಕ ನಾಗರಿಕರನ್ನು ಉಗ್ರಗಾಮಿಗಳೆಂದು ಭದ್ರತಾ ಪಡೆಗಳು ಹೇಗೆ ಭಾವಿಸಿದವು? ಪಿಕ್‌ಅಪ್ ಲಾರಿಯಲ್ಲಿ ಇದ್ದ ನಾಗರಿಕರ ಬಳಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ. ಇಂಥವರ ಮೇಲೆ ಗುಂಡುಹಾರಿಸಿ ಕೊಂದದ್ದೇಕೆ? ಗುಂಡು ಹಾರಿಸಲು ಆದೇಶ ನೀಡಿದವರು ಯಾರು?

ಭದ್ರತಾ ಪಡೆಗಳ ಅಪ್ರಚೋದಿತ ಗುಂಡಿನ ದಾಳಿಗೆ ಬಲಿಯಾದವರೆಲ್ಲ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು. ತಮ್ಮ ದೈನಂದಿನ ಕಾರ್ಯ ಮುಗಿಸಿ ಸಂಜೆಯ ಹೊತ್ತು ಪಿಕ್‌ಅಪ್ ವಾಹನದಲ್ಲಿ ತಮ್ಮ ಮನೆಯತ್ತ ಹೊರಟಿದ್ದರು. ನಿರಾಯುಧರಾದ ಇವರನ್ನು ಉಗ್ರಗಾಮಿಗಳು ಎಂದು ಭದ್ರತಾ ಪಡೆ ಸಿಬ್ಬಂದಿ ತಪ್ಪಾಗಿ ಭಾವಿಸಿ, ಗುಂಡು ಹಾರಿಸಿ ಕೊಂದಿದ್ದು ಸಾಮಾನ್ಯ ಲೋಪವಲ್ಲ. ಸರಕಾರ ಪರಿಹಾರ ನೀಡಬಹುದು. ಆದರೆ ಸತ್ತವರ ಜೀವ ಮರಳಿ ಬರುವುದಿಲ್ಲ. ದುಡಿದು ಮನೆ ನಡೆಸುವವರನ್ನು ಕಳೆದುಕೊಂಡು ಬೀದಿಗೆ ಬೀಳುವ ಕುಟುಂಬಗಳ ಯಾತನೆಯನ್ನು ಯಾವ ಪರಿಹಾರ ಧನವೂ ಭರಿಸಲು ಸಾಧ್ಯವಿಲ್ಲ.

ಭದ್ರತಾ ಪಡೆಗಳು ನಡೆಸಿದ ಅಮಾಯಕ ಕಾರ್ಮಿಕರ ಈ ಬರ್ಬರ ಹತ್ಯಾಕಾಂಡಕ್ಕೆ ಮುಖ್ಯ ಕಾರಣ ಸೇನಾಪಡೆಗಳಿಗೆ ನೀಡಲಾಗಿರುವ ರಕ್ತದಾಹಿಯಾದ ವಿಶೇಷಾಧಿಕಾರವಾಗಿದೆ. ಈಶಾನ್ಯ ಭಾರತದ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಆಯ್ದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸೇನೆಯ ವಿಭಿನ್ನ ಪಡೆಗಳಿಗೆ ಬಂಡುಕೋರ ಚಟುವಟಿಕೆಗಳನ್ನು ಹತ್ತಿಕ್ಕುವ ನೆಪದಲ್ಲಿ ವಿಶೇಷಾಧಿಕಾರ ನೀಡಲಾಗಿದೆ. 1958ರ ಈ ವಿಶೇಷ ಅಧಿಕಾರದ ಕಾಯ್ದೆ ಪ್ರಕಾರ ವ್ಯಕ್ತಿಯೊಬ್ಬ ಕಾನೂನು ಉಲ್ಲಂಘಿಸಿದ ಎಂದು ಸೈನಿಕರು ಭಾವಿಸಿದರೆ ಆ ವ್ಯಕ್ತಿಯ ಮೇಲೆ ಗುಂಡುಹಾರಿಸಬಹುದಾಗಿದೆ. ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯ ಮನೆಯನ್ನು ತಪಾಸಣೆ ಮಾಡಬಹುದಾಗಿದೆ ಮತ್ತು ಕಾರಣ ನೀಡದೆ ಬಂಧಿಸಬಹುದಾಗಿದೆ. ಈ ವರೆಗೆ ಈ ವಿಶೇಷಾಧಿಕಾರ ಬಹುತೇಕ ಪ್ರಕರಣಗಳಲ್ಲಿ ದುರುಪಯೋಗವಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಾ ಬಂದಿದೆ. ಅಮಾಯಕರನ್ನು ಕೊಲ್ಲುವುದು ಮಾತ್ರವಲ್ಲ, ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ ಹೇಯ ಕೃತ್ಯಗಳೂ ನಡೆದಿವೆ. ಈ ಕರಾಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧ ಈ ಹಿಂದೆ ಮಣಿಪುರದ ಮಹಿಳೆಯರು ಹಾಡಹಗಲು ಬೆತ್ತಲೆಯಾಗಿ ಬೀದಿಗೆ ಬಂದು ಭದ್ರತಾ ಪಡೆಗಳ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. 1958ರಲ್ಲಿ ಸೇನೆಗೆ ಕೊಲ್ಲುವ ಅಧಿಕಾರ ನೀಡಿದ ನಂತರ ಈಶಾನ್ಯ ಭಾರತ ಹತ್ಯಾಕಾಂಡದ ತಾಣವಾಗಿದೆ. ಬ್ರಿಟಿಷ್ ಸರಕಾರವಿದ್ದಾಗ ಜಾರಿಗೆ ಬಂದಿದ್ದ ಜನರನ್ನು ಕೊಲ್ಲುವ ಈ ಕರಾಳ ಕಾಯ್ದೆಯನ್ನು ಸ್ವತಂತ್ರ ಭಾರತದ ಜನತಾಂತ್ರಿಕ ಸರಕಾರಗಳೂ ಮುಂದುವರಿಸಿದವು. 1984ರಲ್ಲಿ ಹಿರಾಂಗೊಯಿತಾಂಗ್ ಹತ್ಯಾಕಾಂಡ, 2000ರಲ್ಲಿ ಮಾಲೋಮ್ ಹತ್ಯಾಕಾಂಡದ ಸಾಲಿಗೆ ಸೇರಿದ ಮೊನ್ ಹತ್ಯಾಕಾಂಡದಲ್ಲಿ ಕೂಡ ಅಮಾಯಕ ಕಾರ್ಮಿಕರನ್ನು ಕೊಂದ ಸೈನಿಕರು ಈ ವಿಶೇಷಾಧಿಕಾರ ಕಾಯ್ದೆಯನ್ನು ಗುರಾಣಿಯಾಗಿ ಬಳಸಿಕೊಂಡು ಆರೋಪ ಮುಕ್ತರಾಗಿ ಹೊರಗೆ ಬಂದರೆ ಅಚ್ಚರಿ ಪಡಬೇಕಾಗಿಲ್ಲ.

ಈಶಾನ್ಯ ರಾಜ್ಯಗಳು ವಿಭಿನ್ನ ಬುಡಕಟ್ಟು ಸಮುದಾಯಗಳ ಜನ ಶತಮಾನಗಳಿಂದ ನೆಲೆಸಿದ ಭೂ ಪ್ರದೇಶಗಳಾಗಿವೆ. ಈ ಆದಿವಾಸಿ ಜನರು ತಮ್ಮದೇ ಆದ ಭಾಷೆ, ಸಂಸ್ಕೃತಿ, ಜೀವನ ಪದ್ಧತಿಯನ್ನು ಹೊಂದಿದ್ದಾರೆೆ. ಈ ಜನ ಭಾರತದ ಭಾಗವಾಗಿ ಒಂದಾಗಿ ಬಾಳಬೇಕೆಂದರೆ ಅವರ ಜನಾಂಗೀಯ, ಸಾಂಸ್ಕೃತಿಕ ಅಸ್ಮಿತೆಯನ್ನು ಗೌರವಿಸಬೇಕು. ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯ ಹೆಸರಿನಲ್ಲಿ ಬಹುತ್ವವನ್ನು ನಾಶ ಮಾಡಲು ಹೊರಟರೆ ಈಶಾನ್ಯ ರಾಜ್ಯಗಳಲ್ಲಿ ಎಂದಿಗೂ ನೆಮ್ಮದಿಯ ಶಾಂತಿಯ ವಾತಾವರಣ ಮೂಡಲು ಸಾಧ್ಯವಿಲ್ಲ.

ಜನಸಾಮಾನ್ಯರ ಆಶೋತ್ತರಗಳನ್ನು ಸೇನಾ ಪಡೆಗಳ ಬಂದೂಕಿನಡಿಯಲ್ಲಿ ಬಹಳ ಕಾಲ ಹತ್ತಿಕ್ಕಲು ಸಾಧ್ಯವಿಲ್ಲ. ಪ್ರಭುತ್ವ ದಮನ ನೀತಿಯನ್ನು ಅನುಸರಿಸಿದಷ್ಟು ಅಸಮಾಧಾನ ಹೆಚ್ಚಾಗಿ ಬಂಡಾಯ ಭುಗಿಲೇಳುತ್ತದೆ. ಕಾರಣ ಒಕ್ಕೂಟ ಸರಕಾರ ಇನ್ನಾದರೂ ಸೇನಾಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ಕಾಯ್ದೆಯನ್ನು ತಕ್ಷಣ ರದ್ದು ಮಾಡಬೇಕು. ಈ ಬಗ್ಗೆ ಮಾನವಹಕ್ಕು ಸಂಘಟನೆಗಳು, ರಾಜಕೀಯ ಪಕ್ಷಗಳು ಒತ್ತಾಯಿಸುತ್ತಲೇ ಬಂದಿವೆ. ಈಗಲಾದರೂ ಸರಕಾರ ಬ್ರಿಟಿಷ್ ಕಾಲದ ಈ ಕರಾಳ ಕಾಯ್ದೆಯನ್ನು ರದ್ದುಗೊಳಿಸಬೇಕು.

ನಾಗಾಲ್ಯಾಂಡ್ ಘಟನೆಯಲ್ಲಿ ಒಬ್ಬ ಸೈನಿಕನೂ ಸಾವಿಗೀಡಾಗಿದ್ದಾನೆ. ಭದ್ರತಾ ಪಡೆಗಳಲ್ಲಿ ಕೆಲಸ ಮಾಡುವ ಯೋಧರು ಕೂಡ ಭಾರತದ ನಾಗರಿಕರು. ಇದೇ ಸಮಾಜದಿಂದ ಬಂದವರು. ಇವರಲ್ಲಿ ಹೆಚ್ಚಿನವರು ಬಡವರು ಮತ್ತು ತಳ ಸಮುದಾಯಗಳಿಗೆ ಸೇರಿದವರ ಮಕ್ಕಳು. ಸರಕಾರದ ತಪ್ಪುಧೋರಣೆಗಳ ಪರಿಣಾಮವಾಗಿ ಅಮಾಯಕ ನಾಗರಿಕರು ಮತ್ತು ಸೈನಿಕರು ಬಲಿಪಶುಗಳಾಗುತ್ತಿದ್ದಾರೆ. ಇನ್ನು ಮುಂದೆ ಹೀಗಾಗದಂತೆ ಒಕ್ಕೂಟ ಸರಕಾರ ಎಚ್ಚರ ವಹಿಸದಿದ್ದರೆ ಪರಿಸ್ಥಿತಿ ಹದಗೆಡುತ್ತಲೇ ಹೋಗುತ್ತದೆ. ಹಾಗಾಗಿ ಸರಕಾರ ಈಶಾನ್ಯ ರಾಜ್ಯಗಳ ಜನರ ಭಾವನೆಗೆ ಸ್ಪಂದಿಸಬೇಕು. ಸೇನಾಪಡೆಗಳಿಗೆ ನೀಡಿರುವ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಗೊಳಿಸಬೇಕು ಮತ್ತು ಶನಿವಾರದ ಹತ್ಯಾಕಾಂಡಕ್ಕೆ ಕಾರಣರಾದವರನ್ನು ತನಿಖೆಗೆ ಗುರಿಪಡಿಸಿ ಶಿಕ್ಷಿಸಬೇಕು.ಹತ್ಯೆಗೊಳಗಾದ ಅಮಾಯಕ ನಾಗರಿಕರ ಕುಟುಂಬಗಳಿಗೆ ಸೂಕ್ತವಾದ ಪರಿಹಾರವನ್ನು ತಕ್ಷಣ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News