ಇಂಡೊನೇಶ್ಯಾ: ಮತ್ತೆ ಬೆಂಕಿ ಉಗುಳಿದ ಸೆಮೆರು ಪರ್ವತ

Update: 2021-12-06 18:35 GMT
ಸಾಂದರ್ಭಿಕ ಚಿತ್ರ

ಜಕಾರ್ತ, ಡಿ.5: ಇಂಡೊನೇಶ್ಯಾದ ಪೂರ್ವದಲ್ಲಿನ ಜಾವಾ ಪ್ರಾಂತದ ಸೆಮೆರು ಪರ್ವತದಿಂದ ಸೋಮವಾರ ಮತ್ತೆ ಬಿಸಿ ಬೂದಿ ಹೊರಗೆ ಹಾರತೊಡಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಶನಿವಾರ ಸೆಮೆರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಸಮೀಪದ ಗ್ರಾಮದಲ್ಲಿನ ಕನಿಷ್ಟ 15 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಭಯಭೀತರಾಗಿ ಪಲಾಯನ ಮಾಡಿದ್ದಾರೆ. ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಾವಾದಲ್ಲಿರುವ ಸುಮೆರು ಪರ್ವತದಲ್ಲಿ ಶನಿವಾರ ಜ್ವಾಲಾಮುಖಿ ಹೊಗೆಯ ಸಹಿತ ಬಿಸಿ ಬೂದಿಯನ್ನು ಉಗುಳಲಾರಂಭಿಸಿದ್ದು ಪರ್ವತದಿಂದ ಬಿಸಿಬೂದಿ ಸುಮಾರು 12 ಕಿ.ಮೀನಷ್ಟು ಎತ್ತರಕ್ಕೆ ನೆಗೆದಿದೆ. ಜೊತೆಗೆ ಲಾವಾರಸ ಮತ್ತು ಬಿಸಿಗಾಳಿ ಸಮೀಪದ ಗ್ರಾಮಗಳಿಗೆ ಹರಿದುಬಂದಿದ್ದು ಲುಮಾಜಂಗ್ ಪ್ರದೇಶದ ಹಲವು ಗ್ರಾಮಗಳು ಬೂದಿಯಿಂದ ಮುಚ್ಚಿಹೋಗಿವೆ. ವಿಮಾನದಿಂದ ತೆಗೆದ ಫೋಟೋದಲ್ಲಿ ರಸ್ತೆ, ವಾಹನಗಳು ಹಾಗೂ ಜಾನುವಾರುಗಳು ಬೂದಿಯಿಂದ ಮುಚ್ಚಿಹೋಗಿರುವ ದೃಶ್ಯ ಕಂಡುಬಂದಿದೆ. ಸೋಮವಾರ ಪರ್ವತದಿಂದ ಮತ್ತೆ ಬಿಸಿ ಬೂದಿ ಹೊರಗೆ ಹಾರಿಬಂದ ಕಾರಣ ರಕ್ಷಣೆ ಮತ್ತು ಪರಿಹಾರ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಜ್ವಾಲಾಮುಖಿ ಬೂದಿಯಿಂದ ಆವರಿಸಿದ ಪ್ರದೇಶಗಳಿಂದ ಅಪಾಯಕಾರಿ ದಟ್ಟ ಹೊಗೆ ಹೊರ ಹೊಮ್ಮುತ್ತಲೇ ಇದೆ. ಜ್ವಾಲಾಮುಖಿಯ ಶಿಲಾಖಂಡಗಳು ಗಟ್ಟಿಯಾಗ ತೊಡಗಿದ್ದರಿಂದ ಬೂದಿಮಿಶ್ರಿತ ಮಣ್ಣನ್ನು ಅಗೆದು ರಕ್ಷಣಾ ಕಾರ್ಯ ಮುಂದುವರಿಸಲು ತೊಡಕಾಗಿದೆ. ಕೆಲವು ದೇಹಗಳು ಬಿಸಿಮಣ್ಣಿನ ಅಡಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News