ಬಿಹಾರ ಗ್ರಾಮದ ಕೋವಿಡ್ ಲಸಿಕೆ ಪಡೆದವರ ಪಟ್ಟಿಯಲ್ಲಿ ಮೋದಿ, ಶಾ, ಸೋನಿಯಾ, ಪ್ರಿಯಾಂಕ ಚೋಪ್ರ!

Update: 2021-12-07 10:31 GMT

ಪಾಟ್ನಾ: ಬಿಹಾರದ ನಕ್ಸಲ್ ಪೀಡಿತ ಅರ್ವಾಲ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಟಿ ಪ್ರಿಯಾಂಕ ಚೋಪ್ರಾ ಸೇರಿದ್ದಾರೆಂದು ದಾಖಲೆಗಳಲ್ಲಿ ಸೇರಿಸಲಾಗಿದೆ.

ಈ ಎಡವಟ್ಟು ನಡೆಸಿದ್ದಕ್ಕಾಗಿ ಕೇಂದ್ರದ ಡೇಟಾ ಎಂಟ್ರಿ ಆಪರೇಟರ್ ಒಬ್ಬನನ್ನು ಅಮಾನತುಗೊಳಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೆಂದು ತಿಳಿದು ಬಂದಿದ್ದು ಸರಕಾರಿ ವೆಬ್‍ಸೈಟ್‍ನಲ್ಲಿ ಈ ಕೇಂದ್ರದಲ್ಲಿ ಲಸಿಕೆ ಪಡೆದವರ ಮಾಹಿತಿ ಅಪ್ಲೋಡ್ ಮಾಡಿದ್ದ ಸಂದರ್ಭ ಈ ಪ್ರಮಾದ ಬೆಳಕಿಗೆ ಬಂದಿದೆ.

ಈ ವಿಚಾರವನ್ನು ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಗ್ರಾಮದಲ್ಲಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಹೆಸರಿನವರು ಯಾರೂ ಇಲ್ಲ ಆದರೆ ಒಂದಿಬ್ಬರು ಪ್ರಿಯಾಂಕ ಹೆಸರಿನವರಿದ್ದರೂ ಅವರ ಉಪನಾಮೆ ಚೋಪ್ರಾ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿಯ ತನಕ ಬಿಹಾರದಲ್ಲಿ 7 ಕೋಟಿ ಜನರು ಲಸಿಕೆ ಪಡೆದಿದ್ದಾರೆ.

ಬಿಹಾರದ ಕೋವಿಡ್ ಸಾವುಗಳ ಕುರಿತೂ ಗೊಂದಲಗಳಿವೆ. ಬಿಹಾರದಲ್ಲಿ ಒಟ್ಟು 9,655 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಈ ಹಿಂದೆ ಹೇಳಿದ್ದ ಸರಕಾರ ಈ ಸಂಖ್ಯೆಯನ್ನು ಇತ್ತೀಚೆಗೆ ಶೇ 25ರಷ್ಟು ಅಂದರೆ 12,059ಗೆ ಏರಿಸಿತ್ತಲ್ಲದೆ ಕೋವಿಡ್ ಮರಣ ಪ್ರಮಾಣಪತ್ರ ವಿಚಾರಗಳಿಂದ ಈ  ಪರಿಷ್ಕರಣೆ ನಡೆಸಲಾಗಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News