ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಲೆಂದೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ಸರಕಾರ: ಸಿದ್ದರಾಮಯ್ಯ

Update: 2021-12-08 07:34 GMT

ಮೈಸೂರು, ಡಿ.8: ಮುಸ್ಲಿಮ್, ಕ್ರಿಶ್ಚಿಯನ್ನರನ್ನು ಟಾರ್ಗೆಟ್ ಮಾಡಲೆಂದೇ ರಾಜ್ಯದ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಅನಗತ್ಯ. ಆದರೆ ಬಿಜೆಪಿ ಸರ್ಕಾರ ಮುಸ್ಲಿಮ್, ಕ್ರಿಶ್ಚಿಯನ್ನರನ್ನು ಟಾರ್ಗೆಟ್ ಮಾಡಿ ಹಿಂದೂತ್ವವನ್ನು ಹೇರಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುವ ಭಯದಿಂದ ಮತ ಕ್ರೋಡೀಕರಣ ಮಾಡಲು ಇಂತಹ ಹುನ್ನಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಜರಿದರು.

ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶವಿದೆ. ಆದರೆ ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ, ಆದರೆ  ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಲ್ಲದೆ ಜನಸಾಮಾನ್ಯರ ಸ್ವತಂತ್ರವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಂದೂತ್ವದಲ್ಲಿ ಸಮಾನತೆ ಇಲ್ಲ ಎಂದೇ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಾಗಾಗಿ ಅವರವರಿಗೆ ಯಾವ ಧರ್ಮದಲ್ಲಿ ನಂಬಿಕೆ ಇದಿಯೊ ಆ ಧರ್ಮವನ್ನು ಅನುಸರಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು.

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಕ್ಷದ್ದು:

ಮೇಕೆದಾಟು ಪಾದಯಾತ್ರೆ ಡಿ.ಕೆ. ಶಿವಕುಮಾರ್ ಮಾಡುತ್ತಿಲ್ಲ, ಕಾಂಗ್ರೆಸ್ ಪಕ್ಷ ಮಾಡುತ್ತಿರುವುದು. ನಾನು ಸಹಿತ ನಮ್ಮ ಪಕ್ಷದ ಮುಖಂಡರುಗಳೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿದರು.

ಮೇಕೆದಾಟು ಯೋಜನೆ ಜಾರಿ ಮಾಡಬೇಕೆಂದು ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವುದು ಡಿ.ಕೆ.ಶಿವಕುಮಾರ್ ಅಲ್ಲ, ಇದು ಪಕ್ಷದ ತೀರ್ಮಾನ‌. ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರುಗಳು ಭಾಗವಹಿಸುತ್ತೇವೆ. ಬಿಜೆಪಿಯವರಿಗೆ ಏಕೆ ಅನುಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡಲು ಡಿಪಿಆರ್ ಮಾಡಿಸಿ ಹಣವನ್ನು ಮೀಸಲಿಟ್ಟಿದ್ದೆ. ಆದರೆ ನಂತರ ಬಂದ ಕುಮಾರಸ್ವಾಮಿ ಸರ್ಕಾರ ಮುಂದುವರಿಸಲಿಲ್ಲ, ನಿಮಗೆ ನಿಜವಾಗಲೂ ಯೋಜನೆ ಜಾರಿ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಜಾರಿ ಮಾಡಿ ಅದು ಬಿಟ್ಟು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸಬೇಡಿ ಎಂದು ಲೇವಡಿ ಮಾಡಿದರು.

ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಯಾರು ಹೇಳಿದರು? ನಾನು ಮತ್ತು ಡಿ.ಕೆ.ಶಿವಕುಮಾರ್ ಅನ್ಯೋನ್ಯವಾಗಿದ್ದೇವೆ. ಬಿಜೆಪಿ ಯವರು ರಾಜಕೀಯ ಮಾಡಲೆಂದೇ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಅವರು ನಮ್ಮಿಬ್ಬರ ಮೇಲೆ ಆಗತ್ಯವಾಗಿ ಆರೋಪ ಮಾಡುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕರುಗಳಾದ ಎಂ.ಕೆ.ಸೋಮಶೇಖರ್, ಕೃಷ್ಣಪ್ಪ, ಕಾಂಗ್ರೆಸ್ ಮುಖಂಡರುಗಳಾದ ಎ.ಲಕ್ಷ್ಮಣ್, ಎಸ್.ಸಿ.ಬಸವರಾಜು, ಕೆ.ಮರೀಗೌಡ, ಕೆ.ಶಿವರಾಮ್, ಬಿ.ಎಂ.ರಾಮು, ಶಿವಪ್ರಸಾದ್, ರವಿಶಂಕರ್, ಬಸವರಾಜು, ಸೀತಾರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News