ಬಿಡಿಎ ನಿವೇಶನ ಹರಾಜಿಗೆ ಮುಂದಾಗಿರುವುದು ನಷ್ಟಕ್ಕೆ ದಾರಿ: ಕಾಂಗ್ರೆಸ್

Update: 2021-12-08 12:13 GMT

ಬೆಂಗಳೂರು, ಡಿ. 8: ‘ಬಿಜೆಪಿ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಭ್ರಷ್ಟಾಚಾರದ ಕೂಪವಾಗಿರುವುದನ್ನು ಇತ್ತೀಚೆಗೆ ನಡೆದ ಎಸಿಬಿ ದಾಳಿಯಿಂದ ಜಗಜ್ಜಾಹೀರಾಗಿದೆ. ಬಡಾವಣೆ ಅಭಿವೃದ್ಧಿಗೆ ಹಣವಿಲ್ಲವೆಂದು ಮೂಲಸೌಕರ್ಯವಿಲ್ಲದ ನಿವೇಶನ ಹರಾಜಿಗೆ ಮುಂದಾಗಿರುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತಿದೆ. ನಷ್ಟಕ್ಕೆ ಒಡ್ಡಿಕೊಂಡು ಈ ನಿರ್ಧಾರ ಮಾಡಲಾಗಿದೆ ಎಂದರೆ ಇದರಲ್ಲೂ ಅಕ್ರಮ ಅಡಗಿದೆ ಎಂದೇ ಅರ್ಥ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪ್ರತಿ ಕಾಮಗಾರಿಯಲ್ಲೂ ಶೇ.40ರಷ್ಟು ಕಮಿಷನ್ ಬಿಜೆಪಿಗರ ಜೇಬು ಸೇರುತ್ತಿದೆ, ಹೀಗಿರುವಾಗ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೇ? ರಾಜ್ಯದ ಬಿಜೆಪಿ ನಾಯಕರು ಸದಾ ಜಪಿಸುವ ‘ಯುಪಿ ಮಾಡೆಲ್'ನಂತೆಯೇ ಕರ್ನಾಟಕದಲ್ಲೂ ತೆಂಗಿನಕಾಯಿಯ ಬದಲು ರಸ್ತೆಯೇ ಒಡೆದುಹೋಗುವ ದುಸ್ಥಿತಿ ಒದಗುವುದು ನಿಶ್ಚಿತ!' ಎಂದು ವಾಗ್ದಾಳಿ ನಡೆಸಿದೆ.

‘ಟೆಂಡರ್ ಅನುಮೋದನೆಗೆ, ಬಿಲ್ ಪಾವತಿಗೆ, ಕಾಮಗಾರಿ ಆರಂಭಕ್ಕೆ, ಮೇಲಿನವರಿಂದ ಕೆಳಗಿನವರವರೆಗೂ, ಸಂಸದರು, ಶಾಸಕರಿಂದ ಹಿಡಿದು ಅಧಿಕಾರಿಗಳವರೆಗೂ ಪ್ರತಿ ಹಂತದಲ್ಲೂ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ವಸೂಲಿ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರಕಾರ ಇರುವವರೆಗೂ ರಾಜ್ಯದ ಅಭಿವೃದ್ಧಿ ಅಸಾಧ್ಯ' ಎಂದು ಕಾಂಗ್ರೆಸ್ ಟೀಕಿಸಿದೆ.

'ಈಗಾಗಲೇ ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಬೆಂಗಳೂರಿನ ರಸ್ತೆಗಳನ್ನು ಕಾರಿಡಾರ್‌ಗಳನ್ನಾಗಿಸಲು ಸರ್ಕಾರ ಮುಂದಾಗಿರುವುದು ಅನಗತ್ಯ ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಅಗತ್ಯವಿರುವ ಯೋಜನೆಗಳಿಗೆ ಸಂಪನ್ಮೂಲದ ಕೊರತೆಯ ಸಬೂಬು ಹೇಳುವ ಸರ್ಕಾರ ಇಂತಹ ಅನಗತ್ಯ ಯೋಜನೆಗೆ ಕೈ ಹಾಕಿರುವುದು 40% ಕಮಿಷನ್‌ಗಾಗಿಯೇ?' ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News