ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‍ಇಪಿ ಜಾರಿ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-12-08 13:13 GMT

ಬೆಂಗಳೂರು, ಡಿ.8: ಎನ್‍ಇಪಿ ಜಾರಿ ಕುರಿತು ರಚನೆಯಾಗಿರುವ 26 ಉಪ ಸಮಿತಿಗಳು ಡಿಸೆಂಬರ್ ಅಂತ್ಯದಲ್ಲಿ ವರದಿ ನೀಡಲಿದ್ದು, ವರದಿಯನ್ನು ಪರಿಶೀಲಿಸಿ ಮುಂದಿನ ವರ್ಷದಲ್ಲಿ ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಎನ್‍ಇಪಿಯನ್ನು ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಂತದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುವುದು. ಈ ಕುರಿತು ರಚನೆಯಾಗಿರುವ ಉಪ-ಸಮಿತಿಗಳು ಇದೇ ಡಿ.20ರ ಒಳಗೆ ಸರಕಾರಕ್ಕೆ ವರದಿ ಸಲ್ಲಿಸಲಿವೆ. ಎನ್‍ಇಪಿ ಜಾರಿಗೊಳಿಸುವಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಮುಂದಿನ ಐದು ವರ್ಷದಲ್ಲಿ ಎನ್‍ಇಪಿ ವ್ಯಾಪ್ತಿಗೆ ಎಲ್ಲಾ ವಿದ್ಯಾರ್ಥಿಗಳು ಒಳಪಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿದೆ. ಹಾಗೆಯೇ ಎನ್‍ಇಪಿ ಜಾರಿಗೊಳಿಸಲು ಅಗತ್ಯವಾದ ಪಠ್ಯಕ್ರಮ ಹಾಗೂ ಪಠ್ಯಕ್ರಮ ರಚನೆ ಕಾರ್ಯ ಆರಂಭವಾಗಲಿದೆ ಎಂದರು.

ಪೂರ್ವ ಪ್ರಾಥಮಿಕ ಶಾಲೆ ಹಂತದಲ್ಲಿ ಎನ್‍ಇಪಿ ಪರಿಚಯಿಸಲಾಗುತ್ತಿದ್ದು, ಐದು ವರ್ಷದಲ್ಲಿ ಆ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಎನ್‍ಇಪಿ ಅಡಿ ಪೂರೈಸಿ ಐದನೇ ತರಗತಿವರೆಗೂ ಓದಲಿದ್ದಾರೆ. ಹೀಗಾಗಿ ಐದನೇ ತರಗತಿಗೆ ಎರಡನೇ ಹಂತದಲ್ಲಿ ಎನ್‍ಇಪಿ ಜಾರಿಗೊಳಿಸುವ ಬಗ್ಗೆ ಯೋಜನೆ ಮಾಡುತ್ತಿದ್ದೇವೆ. ಹೀಗಾಗಿ ಇದರ ಸಾಧಕ ಬಾಧಕಗಳ ಬಗ್ಗೆ ತಜ್ಞರ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಪಡೆಯ ಶಿಫಾರಸ್ಸಿನಂತೆ ಕ್ರಮ

ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಅಧ್ಯಕ್ಷತೆಯಲ್ಲಿ ರಚನೆಯಾದ ಕಾರ್ಯಪಡೆಯು ವಿಶೇಷ ಶೈಕ್ಷಣಿಕ ವಲಯವೆಂದು ಮಾಡಲು ಶಿಫಾರಸು ಮಾಡಿದೆ. ಅದರಂತೆ ಶಿಕ್ಷಣ ದಾಖಲಾತಿ, ಅಪೌಷ್ಠಿಕತೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಶೈಕ್ಷಣಿಕ ಪ್ರಗತಿ, ಆರೋಗ್ಯ ಕ್ಷೇತ್ರದ ಮಾನದಂಡಗಳನ್ನು ಮುಂದಿಟ್ಟುಕೊಂಡು ವಿಶೇಷ ಶಿಕ್ಷಣ ವಲಯ ರಚನೆ ಮಾಡಲಾಗುತ್ತದೆ. ಹೀಗೆ ಗುರುತಿಸಿದ ವಿಶೇಷ ಶೈಕ್ಷಣಿಕ ವಲಯದಲ್ಲಿ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು.

-ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪೌಢಶಾಲಾ ಶಿಕ್ಷಣ ಸಚಿವ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News