2021-22ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ: ಮಾರ್ಗಸೂಚಿ ಪ್ರಕಟ

Update: 2021-12-08 13:50 GMT

ಬೆಂಗಳೂರು, ಡಿ.8: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2021-22ನೇ ಸಾಲಿನ ಎಸೆಸೆಲ್ಸಿ ಮುಖ್ಯ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು, ಪರೀಕ್ಷೆಗೆ ಸಿದ್ಧಗೊಳಿಸಲು ಆದೇಶ ಹೊರಡಿಸಿದೆ.

2022 ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯಲಿರುವ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ರಾಜ್ಯದ ಸರಕಾರಿ ಮತ್ತು ಅನುದಾನಿತ, ಖಾಸಗಿ ಶಾಲೆಗಳಲ್ಲಿ ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಮಾಹಿತಿಯನ್ನು ಮಂಡಳಿಯ https:sslc.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್‍ಲೋಡ್ ಮಾಡಲು ಆದೇಶದಲ್ಲಿ ಸೂಚಿಸಿದೆ.

ಮಂಡಳಿಯ ಮಾರ್ಗಸೂಚಿಯಲ್ಲಿ ಮಾನದಂಡ, ಅಂಕಗಳು ಮತ್ತು ಶ್ರೇಣಿಗಳ ವಿವರ, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಮುದ್ರಣೆ ಕುರಿತು ಮಾಹಿತಿ ನೀಡಲಾಗಿದೆ. ಮಾರ್ಚ್-ಏಪ್ರಿಲ್ 2022ರಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಆಂತರಿಕ ಪರೀಕ್ಷೆ ನಡೆಯಲಿದ್ದು, ಆಂತರಿಕ ಪರೀಕ್ಷೆಗಳು ಎಲ್ಲಾ ವಿಷಯಗಳಲ್ಲಿ 20 ಅಂಕಗಳಿಗೆ ಆದರೆ ಪ್ರಥಮ ಭಾಷೆಗೆ 125 ಅಂಕವಿದ್ದು ಅದರಲ್ಲಿ 25 ಅಂಕಗಳಿಗೆ ನಡೆಸಲಾಗುವುದು.

ಒಟ್ಟಾರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಬಾಹ್ಯ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿಯು 500 ಅಂಕಗಳಲ್ಲಿ 175 ಅಂಕಗಳನ್ನು ಅಂದರೆ ಶೇ.35 ಗಳಿಸಬೇಕು ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 30 ಪ್ರತಿಶತ ಅಂಕಗಳನ್ನು ಪಡೆದಿರಬೇಕು. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾಗಲು ಆಂತರಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಗಳಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಾಲಾ ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶದಲ್ಲಿ ವಿವರವಾದ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ ನಿರ್ದೇಶನ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News