ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ಡಿ.12ಕ್ಕೆ ಬೆಳಗಾವಿಯಲ್ಲಿ ರೈತ ಸಮಾವೇಶ
ಬೆಂಗಳೂರು, ಡಿ.8: ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರವು ರದ್ದುಪಡಿಸಿದ ಕೃಷಿ ಕಾಯ್ದೆಗಳ ಮುಂದುವರೆದ ಭಾಗವಾಗಿ ರಾಜ್ಯದಲ್ಲಿ ಜಾರಿಗೊಳಿಸಿದ ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಆದುದರಿಂದ ಬೆಳಗಾವಿಯಲ್ಲಿ ಡಿ.12ರಂದು ರಾಜ್ಯಮಟ್ಟದ ರೈತ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಜೆ.ಸಿ. ಬಯ್ಯಾ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರೈತರ ಹಿತವನ್ನು ಕಡೆಗಣಿಸಿ, ಕಾರ್ಪೊರೇಟ್ ಸಂಸ್ಥೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಾರಿಗೊಳಿಸಿದ್ದ ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ಆದರೆ ರಾಜ್ಯ ಸರಕಾರವು ರೈತರಿಗೆ ಮಾರಕವಾಗಿ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಹಾಗಾಗಿ ಈ ಕಾಯ್ದೆಗಳ ವಿರುದ್ದ ರೈತರು ಒಗ್ಗೂಡಿ ಹೋರಾಟ ಮಾಡಬೇಕು ಎಂದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆದ ಬಹುತೇಕ ಬೆಳೆಗಳು ರೈತರ ಕೈ ಸೇರುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಸರಕಾರವು ರೈತರ ಕಷ್ಟವನ್ನು ಪರಿಗಣಿಸಿ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ರೈತರ ಸಮಾವೇಶವನ್ನು ಆಯೋಜಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಡಿ.13ರಂದು ಚಳಿಗಾಲದ ಅಧಿವೇಶನದಲ್ಲಿ ರೈತರ ಬೇಡಿಕೆಗಳನ್ನು ಜನಪ್ರತಿಧಿಗಳು ಚರ್ಚಿಸಿ, ಪರಿಹರಿಸುವಂತೆ ಒತ್ತಡ ತರಲಾಗುವುದು ಎಂದರು.
ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಹೆಚ್.ವಿ.ದಿವಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೆಹಲಿ ಮಾದರಿ ಹೋರಾಟ ಅಗತ್ಯ
ಕೇಂದ್ರ ಮತ್ತು ರಾಜ್ಯದಲ್ಲಿರುವ ಆಡಳಿತ ಪಕ್ಷ ಬಂಡವಾಳಶಾಹಿಗಳ ಶ್ರೇಯಸ್ಸಿಗೆ ಶ್ರಮಿಸುತ್ತಿವೆ ಹೊರತು, ರೈತರ, ಕಾರ್ಮಿಕರ, ದೀನ-ದಲಿತರ ಪರವಾಗಿಲ್ಲ. ಕೋಮುವಾದದ ಹೆಸರಿನಲ್ಲಿ ಬದುಕುವ ಸ್ವಾತಂತ್ರ್ಯವನ್ನೇ ಹರಣ ಮಾಡುತ್ತಿವೆ. ರಾಜ್ಯದಲ್ಲಿ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಡೆಯುವಂತೆ ದೆಹಲಿಯಲ್ಲಿ ನಡೆದಿರುವ ರೈತ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡಬೇಕಾಗಿದೆ.
-ಮಾವಳ್ಳಿ ಶಂಕರ್, ರಾಜ್ಯಾಧ್ಯಕ್ಷ, ದಸಂಸ(ಅಂಬೇಡ್ಕರ್‍ವಾದ)