ಅರ್ಜಿ ಹಾಕಿದ ಒಂದೇ ದಿನದಲ್ಲಿ ‘ಭೂ ಪರಿವರ್ತನೆ': ಕಂದಾಯ ಸಚಿವ ಆರ್.ಅಶೋಕ್

Update: 2021-12-08 15:19 GMT

ಬೆಂಗಳೂರು, ಡಿ. 8: ‘ಭೂ ಪರಿವರ್ತನೆಗೆ ಆಗುತ್ತಿದ್ದ ವಿಳಂಬ ತಪ್ಪಿಸಲು ಸರಕಾರ ತೀರ್ಮಾನಿಸಿದ್ದು, ಒಂದೇ ದಿನಗಳಲ್ಲಿ ಭೂಮಿ ಪರಿವರ್ತನೆಗೆ ಹೊಸ ಯೋಜನೆ ರೂಪಿಸಲಾಗುವುದು' ಎಂದು ಕಂದಾಯ ಸಚಿವ ಆರ್. ಅಶೋಕ್  ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭೂ ಖರೀದಿದಾರರು ಅದರ ಪರಿವರ್ತನೆಗಾಗಿ ಅನಗತ್ಯ ಅಲೆದಾಟ ಹಾಗೂ ಆಗುತ್ತಿದ್ದ ವಿಳಂಬ ತಪ್ಪಿಸಲು ಇದ್ದ ಕಾನೂನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ಭೂ ಪರಿವರ್ತನೆ ಹೆಸರಿನಲ್ಲಿ ನಡೆಯುತ್ತಿದ್ದ ಅಂದಾದುಂದಿ ವ್ಯವಹಾರಕ್ಕೂ ಕಡಿವಾಣ ಬೀಳಲಿ. ಕೈಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಭೂಮಿ ಖರೀದಿಸಿದವರು ಅನಗತ್ಯ ಅಲೆದಾಟ ಮಾಡಬೇಕಾಗಿತ್ತು ಎಂದ ಅಶೋಕ್, ಈ ಹಿಂದೆ ಭೂಮಿ ಖರೀದಿಸಿದವರು ಒಂದು ಎಕರೆಗೆ 5ಲಕ್ಷ ರೂ.ಅಧಿಕಾರಿಗಳ ಮಟ್ಟದಲ್ಲಿ ಪಾವತಿಸಬೇಕಾಗಿತ್ತು. ಇದರಿಂದ ವರ್ಷಕ್ಕೆ 300 ರಿಂದ 400ಕೋಟಿ ರೂ.ವಹಿವಾಟು ನಡೆಯುತ್ತಿತ್ತು. ಇದೇ ಕಾರಣಕ್ಕಾಗಿ ನಿಯಮ 79(ಎ)ಮತ್ತು 79(ಬಿ)ಯನ್ನು ಸರಕಾರ ಈಗಾಗಲೇ ರದ್ದುಗೊಳಿಸಿದೆ ಎಂದು ವಿವರಿಸಿದರು.

ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗುತ್ತದೆ. ಆ ಷರತ್ತು ಪೂರೈಸಿದ್ದರೆ ಸಮಸ್ಯೆ ಇಲ್ಲ. ಪರಿವರ್ತನೆಗೆ ಒಳಪಟ್ಟ ಭೂಮಿ ಒತ್ತುವರಿ ಭೂಮಿಯಾಗಿರಬಾರದು. ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದವರ ಭೂಮಿಯಾಗಿರಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳಿವೆ. ಯಾವುದೇ ಸಮಸ್ಯೆ ಇಲ್ಲದಿದ್ದರೆ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News