×
Ad

ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಕಾಂಗ್ರೆಸ್‌ಗೆ ಮರಳಿದ ಗ್ರಾ.ಪಂ ಸದಸ್ಯೆ!

Update: 2021-12-08 21:26 IST

ಶಿವಮೊಗ್ಗ: ಇಂದು ಬೆಳಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ಹಾಗೂ ಶಾಸಕ ಹರತಾಳು ಹಾಲಪ್ಪನವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ಅರಸಾಳು ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪೂರ್ಣಿಮಾ ಸಂಜೆಯಾಗುವಷ್ಟರಲ್ಲಿ ಮತ್ತೆ ಮರಳಿ ಕಾಂಗ್ರೆಸ್‌ಗೆ ಸೇರಿದ್ದು ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆಯನ್ನು ಆಪರೇಶನ್ ಕಮಲದ ಮೂಲಕ ಇಂದು ಬೆಳಗ್ಗೆ ಬಿಜೆಪಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ ಪೂರ್ಣಿಮಾ ಸಂಜೆಯಾಗುವಷ್ಟರಲ್ಲಿ ಮತ್ತೆ ಮರಳಿ ಕಾಂಗ್ರೆಸ್ ವಶವಾಗಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಇಂದು ಬೆಳಗ್ಗೆ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿ ಡಿ.ಎಸ್ ಅರುಣ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅರಸಾಳು ಗ್ರಾಮ ಪಂಚಾಯತ್ ಸದಸ್ಯೆ ಪೂರ್ಣಿಮಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಸಂಜೆಯ ಹೊತ್ತಿಗೆ ಗ್ರಾಪಂ ಸದಸ್ಯೆ ಪೂರ್ಣಿಮಾ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಪಂ ಸದಸ್ಯೆ ಪೂರ್ಣಿಮಾ, ‘ನನಗೆ ರಾಜಕೀಯದ ತಿಳುವಳಿಕೆ ಅಷ್ಟಾಗಿ ತಿಳಿದಿಲ್ಲ. ನನ್ನನ್ನು ಹೀಗೊಂದು ಗ್ರಾಮ ಪಂಚಾಯತ್ ಸದಸ್ಯರ ಕಾರ್ಯಕ್ರಮವಿದೆ ಎಂದು ಕರೆದುಕೊಂಡು ಬಂದು ಸಚಿವರ ಬಳಿ ಶಾಲು ಹಾಕಿಸಿದರು. ಬಿಜೆಪಿ ಪಕ್ಷಕ್ಕೆಸೇರ್ಪಡೆಯಾಗಿದ್ದೇನೆ ಎಂದು ನನಗೆ ನಂತರವೇ ತಿಳಿದಿದ್ದು, ನಾನು ಅರಸಾಳು ಗ್ರಾ.ಪಂ ಅಧ್ಯಕ್ಷರಾದ ಉಮಾಕರ್ ರವರ ಬೆಂಬಲದಿಂದ ಗೆದ್ದು ಬಂದಿದ್ದೇನೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ‘ಬಿಜೆಪಿಯವರು ಅಮಾಯಕ ಸದಸ್ಯರನ್ನು ಈ ರೀತಿಯಾಗಿ ದಾರಿ ತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದು. ನೈತಿಕತೆಯಿಂದ ಚುನಾವಣೆ ಎದುರಿಸಿ ಗೆಲ್ಲಲಿ, ಬಿಜೆಪಿಯವರಿಗೆ ಈಗಲೇ ಸೋಲಿನ ಭಯ ಶುರುವಾಗಿದೆ ಹಾಗಾಗಿ ಹತಾಶರಾಗಿ ಈ ರೀತಿಯಾದ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ’ ಎಂದರು.

ಅರಸಾಳು ಗ್ರಾ.ಪಂ ಅಧ್ಯಕ್ಷರಾದ ಉಮಾಕರ್ ಮಾತನಾಡಿ, ‘ಸ್ಥಳೀಯ ಬಿಜೆಪಿ ಮುಖಂಡರುಗಳು ಜಿಲ್ಲಾ ಮಟದ ನಾಯಕರನ್ನು ಹಾಗೂ ಸಚಿವರನ್ನು ಮೆಚ್ಚಿಸಲು ಈ ರೀತಿಯಾಗಿ ಅಮಾಯಕ ಸದಸ್ಯರನ್ನು ಬಲಿ ಕೊಡಬಾರದು. ರಾಜಕೀಯ ದಾಳಕ್ಕೆ ಮುಗ್ದ ಅಮಾಯಕ ಸದಸ್ಯರನ್ನು ಬಲಿಪಶು ಮಾಡುವುದು ಸರಿಯಲ್ಲ’ ಎಂದರು.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷ ಸಾಬ್, ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ಎನ್ ಚಂದ್ರೇಶ್, ಶ್ರೀಮಂತ್ ದೂನಾ, ಧನಲಕ್ಷ್ಮಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಸೋಮಶೇಖರ್ ಲಾವಿಗೆರೆ, ಸಾಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರ್, ಹೆದ್ದಾರಿಪುರ ಗ್ರಾಪಂ ಸದಸ್ಯ ಪ್ರವೀಣ್ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News