×
Ad

ಕೊಡಗಿಗೆ ಮೂರು ಬಾರಿ ಭೇಟಿ ನೀಡಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್

Update: 2021-12-08 22:07 IST

ಮಡಿಕೇರಿ ಡಿ.8 : ದೇಶದ ಸೇನಾಕ್ಷೇತ್ರಕ್ಕೆ ಅತಿಹೆಚ್ಚು ಸೈನಿಕರನ್ನು ನೀಡಿದ ಹೆಗ್ಗಳಿಕೆಯ ಕೊಡಗು ಜಿಲ್ಲೆಗೆ 'ಚೀಫ್ ಆಫ್ ಡಿಫೆನ್ಸ್ ಸ್ಟಾಫ್' (ಸಿಡಿಎಸ್) ಬಿಪಿನ್ ರಾವತ್ ಅವರು, ಮೂರು ಬಾರಿ ಭೇಟಿ ನೀಡಿದ್ದರು. 2016, 2017 ಮತ್ತು 2020 ರಲ್ಲಿ ಬಂದಿದ್ದ ಅವರು ಯೋಧರ ನಾಡಿನ ಮೇಲಿನ ಅಭಿಮಾನವನ್ನು ತೋರಿದ್ದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದ ಸಿಡಿಎಸ್ ರಾವತ್ ಅವರು ತಾವು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಕೊಡಗಿಗೆ ಬರುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.  ಸೈನ್ಯದ ದಕ್ಷಿಣ ವಲಯದಿಂದ ಕೊಡಗಿನ ಬಿಟ್ಟಂಗಾಲದಲ್ಲಿ 2016 ರಲ್ಲಿ ನಡೆದ ‘ಆರ್ಮ್ಡ್ ಫೋರ್ಸಸ್ ಗಾಲ್ಫ್’ ಪಂದ್ಯಾವಳಿಯನ್ನು ಉದ್ಘಾಟಿಸಲು ಮತ್ತು ಮಡಿಕೇರಿಯಲ್ಲಿ ನಡೆದ ಸೈನಿಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಂದು ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿದ್ದ ಬಿಪಿನ್ ರಾವತ್ ಅವರು ಕೊಡಗು ಜಿಲ್ಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ್ದರು.

 ನಂತರ 2017 ರಲ್ಲಿ ಅಂದಿನ ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದ ಜನರಲ್ ದಲ್ಬೀರ್ ಸಿಂಗ್ ಅವರೊಂದಿಗೆ ಜಿಲ್ಲೆಗೆ ಆಗಮಿಸಿದ್ದರು. ಆ ಸಂದರ್ಭವೆ ಬಿಪಿನ್ ರಾವತ್ ಅವರು ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಗೆ ಅಗತ್ಯ ನೆರವನ್ನು ನೀಡುವ ಆಶ್ವಾಸನೆಯನ್ನು ನೀಡಿದ್ದಲ್ಲದೆ, ಅದರಂತೆ ನಡೆದುಕೊಂಡದ್ದು ವಿಶೇಷ.

ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿದ್ದ ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪ್ರತಿಮೆಗಳ ಅನಾವರಣ ಸಮಾರಂಭಕ್ಕೆ ಜನರಲ್ ಬಿಪಿನ್ ರಾವತ್ ಅವರು ಆಗಮಿಸಿ, ಮಹಾನ್ ಸೇನಾನಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದ್ದರು.

ನಂತರದ ದಿನಗಳಲ್ಲಿ ಫೀ.ಮಾ.ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಪದಾಧಿಕಾರಿಗಳು ಬಿಪಿನ್ ರಾವತ್ ಅವರನ್ನು ಸಂಪರ್ಕಿಸಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆತರಬೇಕೆನ್ನುವ ಮನವಿಯನ್ನು ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿ ಜನರಲ್ ಬಿಪಿನ್ ರಾವತ್ ಅವರು ನೀಡಿದ ಸಹಕಾರದಿಂದ 2021 ರಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಆಗಮಿಸಿದ್ದರು. ಅಲ್ಲದೆ ರಾವತ್ ಅವರು ಕೂಡ ಜೊತೆಯಲ್ಲಿದ್ದರು.

ಸಿಡಿಎಸ್ ಬಿಪಿನ್ ರಾವತ್ ಅವರ ತಂದೆ ಲಕ್ಷ್ಮಣ ಸಿಂಗ್ ರಾವತ್ ಮತ್ತು ಕೊಡಗಿನ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು ಸಮಕಾಲೀನರು. ಈ ಹಿನ್ನೆಲೆಯಲ್ಲಿ ಬಿಪಿನ್ ರಾವತ್ ಅವರು ಕೊಡಗಿಗೆ ಆಗಮಿಸಿದ ಅಂದರ್ಭ ಅವರಿಗೆ ಬಿ.ಸಿ. ನಂದ ಅವರು ಕೊಡವರ ಸಾಂಪ್ರದಾಯಿಕ ‘ಪೀಚೆಕತ್ತಿ’ಯನ್ನು ನೀಡಿ ‘ಈ ಪೀಚೆ ಕತ್ತಿಯನ್ನು ತಂದೆ ಮಗನಿಗೆ ನೀಡುವಂತದ್ದು. ನಿನ್ನ ತಂದೆ ಮತ್ತು ನಾನು ಸಮಕಾಲೀನರಾಗಿರುವುದರಿಂದ, ತಂದೆಯ ಸ್ಥಾನದಲ್ಲಿರುವ ನಾನು ನಿನಗೆ ಪೀಚೆಕತ್ತಿ ನೀಡುತ್ತಿದ್ದೇನೆ’ ಎಂದು ಹೇಳಿರುವ ಹೃದಯ ಸ್ಪರ್ಷಿ ಘಟನೆಯನ್ನು ನಿವೃತ್ತ ಮೇಜರ್ ಬಿ.ಎ.ನಂಜಪ್ಪ ನೆನಪನ್ನು ಹಂಚಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News