ಬೆಳಗಾವಿ ಅಧಿವೇಶನ: ಎರಡು ಡೋಸ್ ಲಸಿಕೆ, ಆರ್‍ಟಿಪಿಸಿಆರ್ ಕಡ್ಡಾಯ: ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್

Update: 2021-12-09 14:23 GMT

ಬೆಳಗಾವಿ, ಡಿ. 9: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ ತಿಂಗಳ 13ರಿಂದ ಆರಂಭವಾಗಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ಆಗಮಿಸುವ ಅಧಿಕಾರಿಗಳು, ಶಾಸಕರು ಸೇರಿದಂತೆ ಎಲ್ಲರಿಗೂ ಕೋವಿಡ್ ಎರಡು ಡೋಸ್ ಲಸಿಕೆ ಆಗಿರಬೇಕು ಹಾಗೂ 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತೋರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ರೂಪಾಂತರ ಒಮೈಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ನಿರ್ದೇಶನಗಳನ್ನು ನೀಡಿದೆ. ಹೀಗಾಗಿ ಎರಡು ಡೋಸ್ ಲಸಿಕೆ ಮತ್ತು 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್  ರೊಪೋರ್ಟ್‍ನ್ನು ಕಡ್ಡಾಯವಾಗಿ ತೋರಿಸಬೇಕು. ನಾವು ಸ್ಥಳದಲ್ಲೇ ಎರಡು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಿದ್ದೇವೆ. ಈಗಾಗಲೇ ಡಿಪಿಆರ್‍ಗೆ ಪತ್ರ ಬರೆದಿದ್ದೇವೆ, ಎಲ್ಲ್ಲ ಕಾರ್ಯದರ್ಶಿ ಮಟ್ಟದ ಸಿಬ್ಬಂದಿಗಳು, ಎಲ್ಲ ಶಾಸಕರು, ಪರಿಷತ್ ಸದಸ್ಯರು ಎರಡು ಡೋಸ್ ಲಸಿಕೆ ತೆಗೆದುಕೊಂಡ ಬರಬೇಕು ಎಂದು ಹೇಳಿದರು.

ಶಾಸಕರು, ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದೇ ರೀತಿ ಎಲ್ಲ್ಲ ಕೊಠಡಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಕಡತಗಳು ಇ-ಆಫೀಸ್ ಮೂಲಕವೇ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಸುವರ್ಣ ವಿಧಾನಸೌಧದ ತಾರಿಹಾಳ ಸಮೀಪ ಟೌನ್‍ಶಿಪ್ ನಿರ್ಮಿಸಿದ್ದು, ಹೊರಗಡೆಯಿಂದ ಆಗಮಿಸುವವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ಮಾಡುವವರು ಸರಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ 500ಕ್ಕೂ ಹೆಚ್ಚು ಜನರು ಇರಬಾರದು. ಯಾವುದೇ ಕಾರಣಕ್ಕೂ ಹೆಚ್ಚಿಗೆ ಜನ ಸೇರುವಂತಿಲ್ಲ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೊಂಡಸಕೊಪ್ಪ ಹಾಗೂ ಸುವರ್ಣಗಾರ್ಡನ್‍ನಲ್ಲಿ ರೈತರು ಸೇರಿದಂತೆ ಇನ್ನಿತರರ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿದೆ. ಡಿ.13ರಿಂದ 24ರ ವರೆಗೆ ಅಧಿವೇಶನ ನಡೆಯಲಿದ್ದು, ಕೋವಿಡ್ ಮಾರ್ಗಸೂಚಿ ಅನುಸರಿಸಲು ಆಸ್ಥೆ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುವರ್ಣ ವಿಧಾನಸೌಧ ಹಾಗೂ ಬೆಳಗಾವಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News