ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ

Update: 2021-12-09 14:58 GMT

ಬೆಂಗಳೂರು, ಡಿ.9: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನಗೆ ಚಾಮರಾಜಪೇಟೆ ಕ್ಷೇತ್ರದ ಬಗ್ಗೆ ಒಲವೂ ಇಲ್ಲ, ವಿರೋಧವೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ನಾನು ಸತತವಾಗಿ ಪಾಲ್ಗೊಂಡ ಕಾರಣ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದಲೆ ಸ್ಪರ್ಧಿಸುತ್ತಿದ್ದೇನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾನು ಬಾದಾಮಿ ಕ್ಷೇತ್ರದ ಶಾಸಕ ಎಂದರು.

ಕೇವಲ ಚಾಮರಾಜಪೇಟೆ ಕ್ಷೇತ್ರವಷ್ಟೇ ಅಲ್ಲ, ಕೋಲಾರ, ಕೊಪ್ಪಳ, ಚಿಕ್ಕನಾಯಕನಹಳ್ಳಿ, ಅರಕಲಗೂಡು, ಹುಣಸೂರು ಕ್ಷೇತ್ರದವರು ನನ್ನನ್ನು ಅವರ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. ಹಾಗಂತ, ಎಲ್ಲ ಕಡೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲಿ ನಿಲ್ಲುವಂತೆ ಸೂಚನೆ ನೀಡುತ್ತದೆಯೋ ಆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿ.ಟಿ.ರವಿಗೆ ತಿರುಗೇಟು: ಮುಂದಿನ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಬಿಟ್ಟು ಕೊಡಲ್ಲ ಎಂದು ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ನೀಡಿರುವ ಹೇಳಿಕೆ ಹಿಂದೆ ಕಾಣದ ಕೈಗಳಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರು ಯಾರು. ನಮ್ಮ ಪಕ್ಷದ ವಿಚಾರವನ್ನು ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಿ.ಟಿ.ರವಿಗೆ ಉತ್ತರ ಕೊಡುವ ಅಗತ್ಯ ನಮಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News