×
Ad

ಚಿಕ್ಕಮಗಳೂರು: ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಕಾಂಗ್ರೆಸ್ ಸೇರ್ಪಡೆ

Update: 2021-12-09 21:26 IST

ಚಿಕ್ಕಮಗಳೂರು, ಡಿ.9: ವಿಧಾನಪರಿಷತ್ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿದ್ದ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ಗುರುವಾರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಜಿಲ್ಲೆಯ ಕೊಪ್ಪ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‍ಕುಮಾರ್ ಮುರೋಳಿ ನೇತೃತ್ವದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.

ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿದ್ದ ಅವರು, ಕಳೆದ ಎರಡು ದಶಕಗಳಿಂದ ಬಿಜೆಪಿಯಲ್ಲಿದ್ದುಕೊಂಡು ತಾಪಂ, ಜಿಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿಯ ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆದ್ದಿದ್ದ ಅವರು, ಪಕ್ಷದ ಆಂತರಿಕ ಒಪ್ಪಂದಂತೆ 20 ತಿಂಗಳ ಅವಧಿಗೆ ಜಿಪಂ ಅಧ್ಯಕ್ಷೆಯಾಗಿದ್ದರು. ಆಂತರಿಕ ಒಪ್ಪಂದಂತೆ ಅವರು ತಮ್ಮ ಅಧಿಕಾರವಧಿ ಪೂರ್ಣಗೊಂಡರೂ ಜಿಪಂ ಅಧ್ಯಕ್ಷೆಯ ಸ್ಥಾನಕ್ಕೆ ರಾಜೀನಾಮೆ ನೀಡದೇ ಶಾಸಕ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಜಿಲ್ಲಾ ಮುಖಂಡರಿಗೂ ಸೆಡ್ಡು ಹೊಡೆದಿದ್ದರು.

ಪರಿಶಿಷ್ಟರಿಗೆ ಮೀಸಲಾದ ಜಿಪಂ ಅಧ್ಯಕ್ಷೆಯ ಸ್ಥಾನವನ್ನು ಕಿತ್ತುಕೊಂಡು ಜಿಲ್ಲಾ ಬಿಜೆಪಿಯಲ್ಲಿರುವ ಮೇಲ್ವರ್ಗದ ಜಿಪಂ ಸದಸ್ಯರು ಜಿಪಂ ಅಧ್ಯಕ್ಷರಾಗಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಜಿಪಂ ಅಧ್ಯಕ್ಷ ಸ್ಥಾನದ ಅವಧಿಯನ್ನು ಪೂರ್ಣಗೊಳಿಸಿದ್ದರು. ಈ ಕಾರಣಕ್ಕೆ ಬಿಜೆಪಿ ಪಕ್ಷದ ವರಿಷ್ಠರು ಸುಜಾತಾ ಅವರನ್ನು ಪಕ್ಷದಿಂದ ವಜಾ ಮಾಡಿದ್ದರು. ಆ ತಾನಿನ್ನೂ ಬಿಜೆಪಿಯಲ್ಲೇ ಇದ್ದೇನೆಂದು ಹೇಳಿಕೆ ನೀಡಿದ್ದ ಅವರು ಸದ್ಯ ವಿಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ತಮ್ಮೊಂದಿಗೆ ಅವರು ಕೊಪ್ಪ ತಾಲೂಕಿ ಹಲವು ಗ್ರಾಪಂ, ಪಪಂ ಸದಸ್ಯರನ್ನು ಕಾಂಗ್ರೆಸ್‍ಗೆ ಸೇರ್ಪಡೆಗೊಳಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News