ಮೂವರನ್ನ ಹತ್ಯೆಗೈದ ಯೋಧನಿಗೆ ಕೋರ್ಟ್‍ನಿಂದ ಜೀವಾವಧಿ ಶಿಕ್ಷೆ

Update: 2021-12-09 16:19 GMT

ಹುಬ್ಬಳ್ಳಿ, ಡಿ.9: ಆಸ್ತಿ ಕಲಹದ ಹಿನ್ನೆಲೆಯಲ್ಲಿ 11 ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣದ ಅಪರಾಧಿ(ಸಿಆರ್‍ಪಿಎಫ್ ಯೋಧ) ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಧಾರವಾಡ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.

ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ, ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ. 

2010ರಲ್ಲಿ ಮದುವೆಯಾಗಿದ್ದ ಶಂಕ್ರಪ್ಪ ತಿಪ್ಪಣ್ಣ ಮತ್ತು ಪತ್ನಿ ನಡುವೆ ಜಗಳ ನಡೆದಿದ್ದು, ಹೆಂಡತಿ ತವರು ಸೇರಿದ್ದಳು. ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ, ಪತ್ನಿ ಜಗಳ ಮಾಡಿ ತವರು ಸೇರಲು ಕಾರಣ ಎಂದು ಭಾವಿಸಿದ ಯೋಧ, ತಾಯಿಯ ಆಸ್ತಿಯನ್ನು ತನ್ನ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷದಿಂದ ಬೆಟದೂರು ಗ್ರಾಮದ ಯಲ್ಲಪ್ಪ ಭಜಂತ್ರಿ (38), ಮಕ್ಕಳಾದ ಸೋಮಪ್ಪ ಭಜಂತ್ರಿ (11), ಐಶ್ವರ್ಯ ಭಜಂತ್ರಿ (9)ಗೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಮದನಕುಮಾರ ಎಂಬಾತನನ್ನು ಗಾಯಗೊಳಿಸಿದ್ದ. ಈ ವೇಳೆ ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 1ನೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವಂದ್ರಪ್ಪ ಎನ್. ಬಿರಾದಾರ ಅಪರಾಧಿಗೆ 24 ವರ್ಷ ಕಠಿಣ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News