ಹತ್ತು ಸಾವಿರ ಶಾಲೆಗಳನ್ನು ಮುಚ್ಚುವ ಆತಂಕ: ಲೋಕೇಶ್ ತಾಳಿಕಟ್ಟೆ

Update: 2021-12-10 16:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ10: ಸರಕಾರದ ಕಿರುಕುಳ ಸಹಿಸಲಾಗದೆ ಗ್ರಾಮೀಣ ಭಾಗದ ಕೆಲವು ಶಾಲೆಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಸುಮಾರು 10 ಸಾವಿರ ಸಣ್ಣ ಮತ್ತು ಮಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿವೆ ಎಂದು ಕರ್ನಾಟಕ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವು ಹೊರಡಿಸುತ್ತಿರುವ ಮಾರ್ಗಸೂಚಿಗಳಿಂದಾಗಿ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಅನುಸರಿಸದ ರಾಜ್ಯದ ಸುಮಾರು 10,000 ಖಾಸಗಿ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ. ಈ ಶಾಲೆಗಳು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಆದುದರಿಂದ ಸರಕಾರವು ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಹತ್ತು ದಿನಗಳ ಗಡುವಿನೊಳಗೆ ಅಗ್ನಿಶಾಮಕ ಮತ್ತು ಸುರಕ್ಷತಾ ಪ್ರಮಾಣಪತ್ರಗಳನ್ನು ಪಡೆಯುವಂತೆ ಲೋಕೋಪಯೋಗಿ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮೂಲಕ ಇಲಾಖೆಯು ಪ್ರಮಾಣ ಪತ್ರ ನೀಡುವ ಮಾರುಕಟ್ಟೆಯಾಗಿ ಮಾರ್ಪಟ್ಟು, ಇಲಾಖೆಯ ಭ್ರಷ್ಟ ಅಧಿಕಾರಿಗಳಿಗೆ ಹಣ ಸಂಪಾದಿಸಲು ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು. 

ವಿರೋಧ ಪಕ್ಷವು ಶಾಲೆಗಳನ್ನು ಮುಚ್ಚದಂತೆ ಹಾಗೂ ಸಮಸ್ಯೆಯನ್ನು ಬಗೆಹರಿಸುವಂತೆ ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News