ಪರಿಷತ್ ಚುನಾವಣೆ: ಮತದಾರರಿಗೆ ಸಚಿವರಿಂದ ಬೆದರಿಕೆ; ಈಶ್ವರ್ ಖಂಡ್ರೆ ಆರೋಪ

Update: 2021-12-11 11:38 GMT
 ಈಶ್ವರ್ ಖಂಡ್ರೆ

ಬೀದರ್, ಡಿ. 11: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಗ್ರಾ.ಪಂ. ಸದಸ್ಯರಿಗೆ ಬೆದರಿಕೆವೊಡ್ಡಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದಿಲ್ಲಿ ದೂರಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಾಮಮಾರ್ಗದಿಂದ ಚುನಾವಣೆ ಗೆಲ್ಲಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. 15ನೆ ಹಣಕಾಸು ಯೋಜನೆ, ಉದ್ಯೋಗ ಖಾತರಿ ಯೋಜನೆ ಬಂದ್ ಮಾಡಿಸುತ್ತೇವೆ. ವಸತಿ ಯೋಜನೆ ನಿಲ್ಲಿಸುತ್ತೇವೆ ಎಂಬುದು ಸೇರಿದಂತೆ ಹಲವು ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಣ, ಒಡವೆ, ಬೆಳ್ಳಿ ನಾಣ್ಯ ಹಾಗೂ ಮಹಿಳಾ ಸದಸ್ಯೆಯರಿಗೆ ಸೀರೆ ಸೇರಿದಂತೆ ಹಲವು ಆಮಿಷವೊಡ್ಡಿದ್ದಾರೆ. ಇನ್ನು ಕೆಲ ಸದಸ್ಯರಿಗೆ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಗಳ ಸದಸ್ಯರು ಇವರ ದುರಹಂಕಾರ ಹಾಗೂ ದರ್ಪಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಈ ಚುನಾವಣೆ ಫಲಿತಾಂಶದಿಂದ ಬಿಜೆಪಿ ಅವನತಿ ಆರಂಭವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಬಿಜೆಪಿ ಸಂಚು: ನಾನು ನಿನ್ನೆ ಮತದಾನ ಮಾಡಲು ತೆರಳಿದಾಗಿನಿಂದ ಕೊನೆಯ ವರೆಗೂ ನನ್ನ ಬೆನ್ನು ಹತ್ತಿ ಕಾರಿಗೆ ಅಡ್ಡಗಟ್ಟಿ ಏನಾದರೂ ಅಪಾಯ ಮಾಡಬೇಕು ಎಂದು ಬಿಜೆಪಿಯವರು ಸಂಚು ಮಾಡಿದ್ದರು. ಸಮಾಜಘಾತುಕ ಶಕ್ತಿಗಳನ್ನು ಕರೆದುಕೊಂಡು ನನ್ನ ಕಾರಿನ ಹಿಂದೆ ಸುತ್ತಾಡಿದ್ದಾರೆ. ಮೊದಲೇ ನಾನು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News