ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ಡಿ.15ರಿಂದ ಖಾಸಗಿ ಶಾಲೆಗಳ ಪ್ರತಿಭಟನೆ: ಲೋಕೇಶ್ ತಾಳಿಕಟ್ಟೆ

Update: 2021-12-12 13:15 GMT

ಬೆಂಗಳೂರು, ಡಿ.12: ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ಡಿ.15 ಮತ್ತು 16ರಂದು ಪ್ರತಿಭಟನೆ ಮಾಡಲಾಗುವುದು ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿಕೆ ನೀಡಿದ್ದಾರೆ. 

ರವಿವಾರದಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹತ್ತು ಸಾವಿರ ಖಾಸಗಿ ಶಾಲೆಗಳು ಮಾನ್ಯತೆ ನವೀಕರಣ ಅಡಿಯಲ್ಲಿ ಬರುತ್ತವೆ. ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಮಾನ್ಯತೆ ನವೀಕರಣ ಆಗಿಲ್ಲ. ಅಲ್ಲದೆ, ಇಲಾಖೆಯು ಕೇಳಿರುವ 61 ದಾಖಲೆಗಳನ್ನು ಕೇವಲ 6 ದಿನದಲ್ಲಿ ಸಲ್ಲಿಕೆ ಮಾಡಲು ಸಾಧ್ಯವಿಲ್ಲ. ಶಾಲೆಗಳು ಮಕ್ಕಳಿಗೆ ಪಾಠ ಪಾಠ ಮಾಡಲು ಸ್ಥಾಪಿತವಾಗಿವೆಯೇ ಹೊರತು, ಕೇವಲ ದಾಖಲೆಗಳನ್ನು ಒದಗಿಸಲು ಸ್ಥಾಪಿತವಾಗಿಲ್ಲ. ಅಧಿಕಾರಿಗಳು ದಾಖಲೆಗಳ ಕ್ರೋಡೀಕರಣ ನೆಪದಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದನ್ನು ಸಾಕ್ಷಿ ಸಮೇತ ಸಚಿವರ ಗಮನಕ್ಕೆ ತಂದರು ಪ್ರಯೋಜನವಾಗಲಿಲ್ಲ ಎಂದರು.

ಇಲಾಖೆಯು ಶಾಲೆಗಳ ನವೀಕರಣದ ನಿಬಂಧನೆಗಳನ್ನು ಬದಲಿಸಿದೆ. ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಸಲ್ಲಿಸದಿದ್ದರೆ, ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. ಹಾಗಾಗಿ ಮಾನ್ಯತೆ ನವೀಕರಣ ವಿಚಾರದಲ್ಲಿ ಖಾಸಗಿ ಶಾಲೆಗಳು ಅರ್ಜಿ ಸಲ್ಲಿಸಬಾರದು ಎಂದು ರೂಪ್ಸಾ ನಿರ್ಧರಿಸಿದೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಮಾನ್ಯತೆ ನವೀಕರಣ ವಿಚಾರದಲ್ಲಿ ಸರಕಾರ ಸಡಿಲಿಕೆ ಮಾಡಬೇಕು. ಸರಕಾರ ಶಿಕ್ಷಕರಿಗೆ ಘೋಷಿಸಿರುವ ಕೋವಿಡ್ ಪ್ಯಾಕೇಜ್ ಕೇವಲ 1000 ಸಾವಿರ ಶಿಕ್ಷಕರಿಗೆ ಮಾತ್ರ ದೊರೆತಿದ್ದು, ಉಳಿದ 4 ಲಕ್ಷ ನೌಕರರಿಗೆ ಒದಗಿಸಬೇಕು. ಸರಕಾರವು ಖಾಸಗಿ ಶಾಲೆಗಳಿಗೆ ನೀಡಬೇಕಾಗಿರುವ ಆರ್‍ಟಿಇ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸರಕಾರದ ಮುಂದೆ ಬೇಡಿಕೆ ಇಟ್ಟ ಅವರು, ಬೇಡಿಕೆ ಈಡೇರಿಸದಿದ್ದರೆ, 10 ಸಾವಿರ ಶಿಕ್ಷಕರ ಜೊತೆಗೂಡಿ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು. ಪ್ರತಿಭಟನೆಗೆ ಸರಕಾರ ಮಣಿಯದೇ ಹೋದರೆ ಜನವರಿಯಲ್ಲಿ ಖಾಸಗಿ ಶಾಲೆ ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News