ಒಂದು ಸಮುದಾಯವನ್ನು ಗುರಿಯಾಗಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಯತ್ನ: ಸಿದ್ದರಾಮಯ್ಯ
ಬೆಳಗಾವಿ, ಡಿ.13: ಮತಾಂತರ ನಿಷೇಧ ಕಾಯ್ದೆ ಈಗ ಅಗತ್ಯ ಇಲ್ಲ. ಒಂದು ಸಮುದಾಯವನ್ನು ಗುರಿಯಾಗಿಸಲು ಈ ಕಾಯ್ದೆ ತರಲು ಯತ್ನಿಸುತ್ತಿದ್ದಾರೆ. ಅನಗತ್ಯ ಕಿರುಕುಳ ನೀಡಲು ಈ ರೀತಿ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಈ ವಿಧೇಯಕವನ್ನು ಮಂಡಿಸಲು ಬಿಜೆಪಿ ಸರಕಾರ ಮುಂದಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನೈಜ ಸಮಸ್ಯೆಗಳನ್ನು ಮರೆಮಾಚಿ ಪ್ರಚಾರ ಪಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಳೆ ಹಾನಿ, ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಬದಲು ನೈಜ ಸಮಸ್ಯೆಗಳಿಂದ ಜನರನ್ನು ಹಾದಿ ತಪ್ಪಿಸಲು ಸರಕಾರ ಮತಾಂತರ ನಿಷೇಧ ಕಾಯ್ದೆ ಮೂಲಕ ಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸುವ ಯತ್ನದಲ್ಲೇ ನಾವು ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.