ಕುರುಬರು ನಿಮಗೆ ಅಪಥ್ಯವೇ: ಸಿಎಂ ಬೊಮ್ಮಾಯಿಗೆ ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು, ಡಿ.13: ಕಾಶಿ ವಿಶ್ವನಾಥನ ಕಾರಿಡಾರ್ ಉದ್ಘಾಟನೆ ವೇಳೆ ರಾಜ್ಯದಿಂದ ಹಲವಾರು ಧರ್ಮಗುರುಗಳಿಗೆ ಆಹ್ವಾನ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಗಿನೆಲೆ ಕನಕಗುರುಪೀಠದ ಸ್ವಾಮೀಜಿಗೆ ಏಕೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಶಿ ವಿಶ್ವನಾಥನ ಕಾರಿಡಾರ್ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಹಲವು ಸ್ವಾಮೀಜಿಗಳಿಗೆ ಆಹ್ವಾನ ನೀಡಿ ವಾರಣಾಸಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಯನ್ನು ಮಾತ್ರ ಕರೆದಿಲ್ಲ ಯಾಕೆ? ಕುರುಬರು ನಿಮಗೆ ಅಪಥ್ಯವೇ? ಈ ತರಹದ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ದೇಶದ ಹನ್ನೆರಡು ಕಡೆಗಳಲ್ಲಿ ಜ್ಯೋತಿರ್ಲಿಂಗ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇದು ಸ್ವಾಗತಾರ್ಹ. ಆದರೆ ಯಾವುದೇ ಕಾರ್ಯಕ್ರಮಕ್ಕೆ ಕನಕಗುರು ಪೀಠವನ್ನು ಕರೆಯದೆ ಕಡೆಗಣಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಕನಕ ಗುರುಪೀಠಕ್ಕೆ ತನ್ನದೇ ಆದ ಇತಿಹಾಸ ಇದೆ. ಇದು ದೊಡ್ಡ ಗುರುಪೀಠ, ರಾಜ್ಯದ ನಾಲ್ಕು ಕಡೆಗಳಲ್ಲಿ ಶಾಖಾ ಮಠವನ್ನು ಹೊಂದಿದೆ. ಕಾಗಿನೆಲೆ ಕನಕ ಗುರುಪೀಠದ ಮೊದಲ ಸ್ವಾಮೀಜಿ ಬೀರೇಂದ್ ನಾಥ ಸ್ವಾಮೀಜಿ ನಂಜನಗೂಡಿನ ನೇರಳೆ ಗ್ರಾಮದವರು, ಆರೆಸ್ಸೆಸ್ ನಿಂದ ಬಂದವರು, ಹಿಂದೂ ಧರ್ಮ ಪ್ರತಿಪಾದಕರು. ಅಂತಹ ದೊಡ್ಡ ಇತಿಹಾಸವನ್ನು ಹೊಂದಿರುವ ಮಠವನ್ನು ಏಕೆ ಕಡೆಗಣಿಸಿದಿರಿ ಎಂದು ತಿಳಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಶ್ವನಾಥ್ ಒತ್ತಾಯಿಸಿದರು.