ಸುವರ್ಣಸೌಧ ಮುತ್ತಿಗೆಗೆ ಯತ್ನ: ರೈತರು ವಶಕ್ಕೆ
ಬೆಳಗಾವಿ, ಸುವರ್ಣವಿಧಾನಸೌಧ, ಡಿ.13: ಕೇಂದ್ರ ಸರಕಾರದ ಮಾದರಿಯಲ್ಲಿಯೇ ರಾಜ್ಯ ಸರಕಾರವೂ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸುವರ್ಣಸೌಧ ಮುತ್ತಿಗೆ ಚಳವಳಿ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಸೋಮವಾರ ಇಲ್ಲಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಜಮಾಯಿಸಿದ ರೈತ ಹೋರಾಟಗಾರರು ಸುವರ್ಣಸೌಧ ಮುತ್ತಿಗೆ ಚಳವಳಿಗೆ ಮುಂದಾದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಹೋರಾಟಗಾರರು ಪೊಲೀಸರು ವಶಕ್ಕೆ ಪಡೆದು ಬಸ್‍ನಲ್ಲಿ ಕರೆದೊಯ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಸರಕಾರವೂ ತ್ವರಿತಗತಿಯಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ, ಸರಕಾರದ ಪ್ರತಿನಿಧಿಗಳು ಇಲ್ಲಿಗೆ ಬರದಿದ್ದರೆ ನಾವೂ ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಮ್ಮನ್ನು ಯಾರು ತಡೆಯುತ್ತಾರೆ ನೋಡುತ್ತೇವೆ. ನಾವು ಇಲ್ಲಿ ಹರಿಕಥೆ ಕೇಳಲು ಬಂದಿಲ್ಲ, ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ವಾಗ್ದಾಳಿ ನಡೆಸಿದರು.