ಪ್ರಾರ್ಥನಾ ಕೇಂದ್ರಗಳ ವಿದ್ಯುತ್ ಬಿಲ್ ಮನ್ನಾ ಇಲ್ಲ: ಸಚಿವ ಸುನೀಲ್ ಕುಮಾರ್
Update: 2021-12-13 18:20 IST
ಬೆಳಗಾವಿ, ಡಿ.13: ಯಾವುದೇ ರೀತಿಯ ದೇವಾಲಯ, ಮಸೀದಿ ಹಾಗೂ ಚರ್ಚ್‍ಗಳಲ್ಲಿ ಬಾಕಿಯಿರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಧರ್ಮಗಳ ಹಲವು ಪ್ರಾರ್ಥನಾ ಮಂದಿರದ ವಿದ್ಯುತ್ ಬಾಕಿ ಇದೆ. ಆದರೆ, ಬಾಕಿ ಬಿಲ್ ಮನ್ನಾ ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದರು.
ಈಗಾಗಲೇ ಕೋವಿಡ್ ಕಾರಣದಿಂದ ಬಾಕಿ ವಸೂಲಿಗೆ ಗಡವು ನೀಡಲಾಗಿತ್ತು. ಜತೆಗೆ ಕೊಂಚ ರಿಯಾಯಿತಿಯೂ ಪ್ರಕಟಿಸಲಾಗಿತ್ತು. ಆದರೆ, ಈಗ ಇಲಾಖೆಯೂ ನಡೆಯಬೇಕು ಹಾಗಾಗಿ ಮನ್ನಾ ಪ್ರಶ್ನೆಯೇ ಇಲ್ಲ ಎಂದು ಸದನಕ್ಕೆ ತಿಳಿಸಿದರು.
ಯಾವುದೇ ಪ್ರಾರ್ಥನಾ ಮಂದಿರ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರೆ, ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.