ಘಾಟ್ ರಸ್ತೆಗಳ ಶಾಶ್ವತ ದುರಸ್ತಿ: ಸಚಿವ ಸಿ.ಸಿ.ಪಾಟೀಲ್

Update: 2021-12-13 12:56 GMT

ಬೆಳಗಾವಿ, ಡಿ. 13: ರಾಜ್ಯದ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಎಲ್ಲ 9 ಘಾಟ್ ರಸ್ತೆಗಳು ಮೂರು ವರ್ಷಗಳ ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿದ್ದು, ಸದರಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಆಡಳಿತ ಪಕ್ಷದ ಸದಸ್ಯ ಉಮಾನಾಥ ಎ.ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ರಸ್ತೆಗಳನ್ನು ಆದಷ್ಟು ಬೇಗನೆ ಸರಿಪಡಿಸಲಾಗುವುದು. ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ 36.52 ಕೋಟಿ ರೂ. ಮಂಜೂರಾಗಿದ್ದು, ಆರ್ಥಿಕ ಬಿಡ್‍ಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲು ಕಾರ್ಯಾದೇಶ ನೀಡಲಾಗುವುದು.

ಚಾರ್ಮಾಡಿ ಘಾಟಿಯಲ್ಲಿ ರಸ್ತೆ ನಿರ್ವಹಣೆಗೆ 19.36 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಕಾಮಗಾರಿ ಸಧ್ಯದಲ್ಲೇ ಪ್ರಾರಂಭವಾಗಲಿದೆ. ಸಂಪಾಜೆ ಘಾಟ್‍ನಲ್ಲಿ ಕಾಂಕ್ರೀಟ್ ತಡೆಗೋಡೆಗಳ ನಿರ್ಮಾಣ ಕಾಮಗಾರಿಯನ್ನು 58.84ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ಮುಕ್ತಾಯದ ಹಂತದಲ್ಲಿದೆ.

ತೈನ್‍ಘಾಟ್ ರಸ್ತೆಯನ್ನು ಎರಡು ವಲಯಗಳಲ್ಲಿ 856 ಕೋಟಿ ರೂ. ಮತ್ತು 486 ಕೋಟಿ ರೂ. ಮೊತ್ತದಲ್ಲಿ ಇಪಿಸಿ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ. ದೇವಿಮನೆ ಘಾಟ್ ರಸ್ತೆಯನ್ನು 360 ಕೋಟಿ ರೂ. ವೆಚ್ಚದಲ್ಲಿ ಇಪಿಸಿ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಉತ್ತರ ನೀಡಿದರು.

ಸಕ್ರಮಕ್ಕೆ ಅವಕಾಶವಿಲ್ಲ: ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ ಅರಣ್ಯ ಭೂಮಿಯಲ್ಲಿನ ಯಾವುದೇ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಡಿ.ಟಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕು ಅಕ್ರಮ ಸಕ್ರಮ ಸಮಿತಿ ಒಪ್ಪಿಗೆ ಸೂಚಿಸುವ ಪ್ರಕರಣಗಳಲ್ಲಿ ಸಾಗುವಳಿ ಚೀಟಿ ನೀಡಲು ಯಾವುದೇ ತೊಂದರೆಯಿರುವುದಿಲ್ಲ. ಸಮಿತಿಗಳಲ್ಲಿ ಸ್ಥಿರೀಕರಣಗೊಂಡ ಪ್ರಕರಣಗಳನ್ನು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News