ವಿಧಾನ ಪರಿಷತ್ ಚುನಾವಣೆ: ನಾಳೆ ಮತ ಎಣಿಕೆ

Update: 2021-12-13 16:03 GMT

ಬೆಂಗಳೂರು, ಡಿ.13: ವಿಧಾನ ಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಡಿ.10ರಂದು ನಡೆದ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳಿಂದ ತಂದಿರುವ ಮತಪೆಟ್ಟಿಗೆಗಳನ್ನು ಮತ ಎಣಿಕಾ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಮತ ಎಣಿಕಾ ಕಾರ್ಯವು ಡಿ.14ರಂದು ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಡಿ.14ರಂದು ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕಾ ಕಾರ್ಯವು ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಸುಮಾರು 7.30 ಕ್ಕೆ ಅಭ್ಯರ್ಥಿಗಳ ಹಾಗೂ ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಮತ ಎಣಿಕಾ ಕೊಠಡಿಯಲ್ಲಿ ಒಟ್ಟು ಏಳು ಟೇಬಲ್‍ಗಳನ್ನು ಜೋಡಿಸಲಾಗಿದೆ. ಪ್ರತಿ ಟೇಬಲ್‍ಗೆ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್‍ಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಟೇಬಲ್‍ಗೆ ತಲಾ 300 ಮತಪತ್ರಗಳನ್ನು ಎಣಿಕೆಗೆ ಹಂಚಿಕೆ ಮಾಡಲಾಗುವುದು. ಸಿಂಧು ಮತ್ತು ಅಸಿಂಧು ಮತಪತ್ರಗಳನ್ನು ಬೇರ್ಪಡಿಸಿ, ಸಿಂಧು ಮತಪತ್ರಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮೊದಲ ಸುತ್ತಿನ ನಂತರ ಅತಿ ಹೆಚ್ಚು ಮತಗಳನ್ನು ಪಡೆದಿರುವ ಅಭ್ಯರ್ಥಿಯು ಕನಿಷ್ಠ 1036 ಮತಗಳನ್ನು ಪಡೆಯದೇ ಇದ್ದ ಪಕ್ಷದಲ್ಲಿ, ಎರಡನೇ ಸುತ್ತಿನ ಎಣಿಕೆಗೆ ಅತ್ಯಂತ ಕನಿಷ್ಠ ಮತಗಳನ್ನು ಪಡೆದ ಅಭ್ಯರ್ಥಿಯ ಮತಗಳನ್ನು ತೆಗೆದುಕೊಂಡು ಎರಡನೇ ಆದ್ಯತೆಗಾಗಿ ಇತರೆ ಅಭ್ಯರ್ಥಿಗಳ ಟ್ರೇಗೆ ಹಂಚಲಾಗುವುದು. ಹೀಗೆ ಗರಿಷ್ಠ ಮತಸಂಖ್ಯೆ ಓರ್ವ ಅಭ್ಯರ್ಥಿಗೆ ಎಣಿಕೆಯಾಗುವವರೆಗೂ ಮತ ಎಣಿಕೆ ನಡೆಸಲಾಗುವುದು ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.

ಮತ ಎಣಿಕೆಯಲ್ಲಿ ಪಾಲ್ಗೊಳ್ಳುವವರು ನಿಗದಿತ ಗುರುತಿನ ಚೀಟಿ ವಿತರಿಸಲಾಗಿದ್ದು, ಕೋವಿಡ್ ಮುಂಜಾಗೃತ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಮೈಸೂರು : ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಗರದ ಪಡುವಾರಹಳ್ಳಿಯಲ್ಲಿರುವ ಸರ್ಕಾರಿ ಮಹರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಡಿ.ತಿಮ್ಮಯ್ಯ, ಜೆಡಿಎಸ್‍ನಿಂದ ಸಿ.ಎನ್.ಮಂಜೇಗೌಡ, ಬಿಜೆಪಿಯಿಂದ ರಘು ಕೌಟಿಲ್ಯ ಸ್ಪರ್ಧೆ ಮಾಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಖಾಡಕ್ಕಿಳಿದಿದ್ದಾರೆ.

ಚಿಕ್ಕಮಗಳೂರು: ನಗರದ ಎಸ್‍ಟಿಜೆ ಕಾಲೇಜು ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮಂಗಳವಾರದ ಬೆಳಗ್ಗೆ 8ರಿಂದ 14 ಟೇಬಲ್‍ಗಳಲ್ಲಿ 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ಕೆ.ಎನ್.ರಮೇಶ್ ತಿಳಿಸಿದ್ದಾರೆ.

ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಟೇಬಲ್‍ಗೆ ಮೂರು ಜನ ಸಿಬ್ಬಂದಿಯಂತೆ ಒಟ್ಟು 21 ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. ಮತ ಎಣಿಕೆಗೆ ಭಾರತ ಚುನಾವಣಾ ಆಯೋಗದ ಅನುಮತಿ ಕೇಳಲಾಗಿತ್ತು. ಡಿ.12ರಂದು ಮತ ಎಣಿಕೆಗೆ ಅನುಮತಿ ದೊರೆತಿದೆ. ಮಂಗಳವಾರ 7:30ಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‍ನ ಬಾಗಿಲು ತೆರೆದು ಮತ ಪೆಟ್ಟಿಗೆಗಳನ್ನು ಮತ ಎಣಿಕೆಯ ಟೇಬಲ್‍ಗಳಿಗೆ ತರಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News