ಬಿಟ್ ಕಾಯಿನ್ ಪ್ರಕರಣ: ಜಾಮೀನು ಪಡೆದು ನಾಪತ್ತೆಯಾಗಿದ್ದ ಹ್ಯಾಕರ್ ಶ್ರೀಕೃಷ್ಣ ತನಿಖಾಧಿಕಾರಿ ಎದುರು ಹಾಜರು

Update: 2021-12-13 15:17 GMT

ಬೆಂಗಳೂರು, ಡಿ.13: ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಅಂತರ್‍ರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ(26), ಪ್ರಕರಣದ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕಿದ್ದಾನೆ.

ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣ ಹಾಗೂ ಆತನ ಸ್ನೇಹಿತ ವಿಷ್ಣು ಭಟ್‍ನನ್ನು ಜೀವನಭೀಮಾನಗರ ಠಾಣೆ ಪೊಲೀಸರು ಕೆಲ ದಿನಗಳ ಹಿಂದೇ ಬಂಧಿಸಿದ್ದರು. ಪ್ರಕರಣದಲ್ಲಿ ಶ್ರೀಕೃಷ್ಣನಿಗೆ ಜಾಮೀನು ನೀಡಿದ್ದ ಕೋರ್ಟ್, ತಿಂಗಳ 2ನೆ ಹಾಗೂ 4ನೆ ಶನಿವಾರ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವಂತೆ ಷರತ್ತು ವಿಧಿಸಿತ್ತು.

ಜಾಮೀನು ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದ ಶ್ರೀಕೃಷ್ಣ, ಮರುದಿನವೇ ತಲೆಮರೆಸಿಕೊಂಡಿದ್ದ. ಆತ ಎಲ್ಲಿದ್ದಾನೆಂಬ ಮಾಹಿತಿಯೂ ಪೊಲೀಸರಿಗೆ ಇರಲಿಲ್ಲ. ನ್ಯಾಯಾಲಯದ ಷರತ್ತಿನ ಪ್ರಕಾರ ಆತ ಠಾಣೆಗೂ ಹಾಜರಾಗಿರಲಿಲ್ಲ. ಆತನ ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು.

ಇದರ ಬೆನ್ನಲ್ಲೇ ತಮ್ಮ ವಕೀಲರ ಜೊತೆಯಲ್ಲಿ ಶ್ರೀಕೃಷ್ಣ ಜೀವನ್‍ಭೀಮಾನಗರ ಠಾಣೆಗೆ ಬಂದಿದ್ದ. ತನಿಖಾಧಿಕಾರಿ ಎದುರು ಹಾಜರಾಗಿ, ಠಾಣೆ ಪುಸ್ತಕದಲ್ಲಿ ಸಹಿ ಮಾಡಿ ಹೋಗಿದ್ದಾನೆ.

‘ಮಾದಕ ವಸ್ತು ಸೇವಿಸಿ ಹೊಟೇಲೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಶ್ರೀಕೃಷ್ಣ ಹಾಗೂ ಉದ್ಯಮಿಯೊಬ್ಬರ ಮಗ ವಿಷ್ಣು ಭಟ್‍ನನ್ನು ನವೆಂಬರ್ 5ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News