×
Ad

ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ: ಸಚಿವ ಉಮೇಶ್ ಕತ್ತಿ

Update: 2021-12-13 21:20 IST

ಬೆಳಗಾವಿ ಸುವರ್ಣಸೌಧ, ಡಿ.13: ಕನಿಷ್ಠ 100 ರೇಷನ್ ಕಾರ್ಡ್ ಇರುವ ತಾಂಡಾ ಹಾಗೂ ಎಸ್‍ಸಿ ಎಸ್‍ಟಿ ಕಾಲನಿಗಳಿಗೆ, ಅರ್ಜಿ ಸಲ್ಲಿಸಿದ ನಿಯಮಿತ ಕಾಲಮಿತಿಯಲ್ಲಿ ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡುವ ಕುರಿತು, ಪರಿಷತ್ ಕಲಾಪದಲ್ಲಿ ಪ್ರಕಾಶ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ, ರಾಜ್ಯದ ತಾಂಡಾ ಹಾಗೂ ಆದಿವಾಸಿಗಳ ವಾಸ ಸ್ಥಳದಲ್ಲಿ ಕನಿಷ್ಠ 100 ರೇಷನ್ ಕಾರ್ಡ್ ಇದ್ದರೆ, ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಸೆಪ್ಟೆಂಬರ್ 2021 ರಂದು ಆದೇಶ ಮಾಡಲಾಗಿತ್ತು, ಇದುವರೆಗೂ 376 ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಕನಿಷ್ಠ 100 ರೇಷನ್ ಕಾರ್ಡ್ ಇರುವ ತಾಂಡಾಗಳಿಗೆ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಈಗಲೂ ಅನುಮತಿ ನೀಡಲಾಗುತ್ತಿದೆ ಎಂದು ಸದನಕ್ಕೆ ಉತ್ತರಿಸಿದರು.

ನ್ಯಾಯ ಬೆಲೆ ಅಂಗಡಿಗೆ ಅನುಮತಿ ನೀಡುವ ಅಧಿಕಾರವನ್ನ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಅನುಮತಿ ನೀಡದ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಹಾರ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ ಕಲಾಪದಲ್ಲಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News