ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆ ಆಗಬೇಕು: ಸಿದ್ದರಾಮಯ್ಯ ಒತ್ತಾಯ

Update: 2021-12-13 15:58 GMT

ಬೆಳಗಾವಿ , ಡಿ. 13: ‘ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾ ಯೋಧರಿದ್ದ ಹೆಲಿಕಾಪ್ಟರ್ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದ್ದಾರೆ.

ಸೋಮವಾರ ವಿಧಾನಸಭೆ ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಸಿದ್ದರಾಮಯ್ಯ, ಬಿಪಿನ್ ರಾವತ್ ಕಾಪ್ಟರ್ ದುರಂತದ ಬಗ್ಗೆ ಜನತೆಯಲ್ಲಿ ಸಂಶಯವಿದೆ. ರಷ್ಯ ನಿರ್ಮಿತ ಅತ್ಯಾಧುನಿಕ ಹೆಲಿಕಾಪ್ಟರ್ ಅಪಘಾತದ ಕಾರಣ ಏನು ಎಂಬುವುದು ಗೊತ್ತಾಗಬೇಕಿದೆ. ಎರಡು-ಮೂರು ಮಾದರಿಯ ಅತ್ಯಾಧುನಿಕ ಮತ್ತು ಅಡ್ವಾನ್ಸ್ ಇಂಜಿನ್ ಹೊಂದಿರುವ ಹೆಲಿಕಾಪ್ಟರ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬುವುದೇ ಆಶ್ಚರ್ಯ ಎಂದು ತಿಳಿಸಿದರು.

ರಾವತ್ ದುರಂತದ ಬಗ್ಗೆ  ಯಾರ ಕೈವಾಡ ಇದೆ ಎಂಬ ಸಂಶಯ ಪಡುವುದಿಲ್ಲ. ಆದರೆ, ಅಪಘಾತ ಹೇಗಾಯಿತು, ರಾವತ್ ಮತ್ತವರ ಪತ್ನಿ ಡಾ.ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಹೇಗೆ ಮೃತಪಟ್ಟರು ಎಂಬುದು ನಿಗೂಢವಾಗಿದೆ. ಈ ಬಗ್ಗೆ ಜನರಿಗೆ ಸತ್ಯ ತಿಳಿಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದಲೇ ತನಿಖೆ: ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆ ಅಗತ್ಯವಿದೆ. ಇದರ ಜೊತೆಗೆ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ವಿಕೃತ ರೀತಿಯಲ್ಲಿ ಟ್ವೀಟ್ ಮಾಡಿದ ಮತ್ತು ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ ವ್ಯಕ್ತಿಗಳ ಬಗ್ಗೆಯೂ ತನಿಖೆ ಅಗತ್ಯವಿದ್ದು, ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳ ಮೂಲಕವೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮೂರು ಸೇನೆಗಳ ಮುಖ್ಯಸ್ಥ, ಭಾರತ ದೇಶದ ಹೆಮ್ಮೆಯ ಪುತ್ರ ರಾವತ್ ಅವರ ಸಾವಿನಲ್ಲಿಯೂ ದ್ವೇಷ ಸಾಧನೆ ಮಾಡಿ ದುಷ್ಟ ಶಕ್ತಿಗಳು ಯಶಸ್ವಿಯಾಗಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಈಶ್ವರಪ್ಪ ಇದೇ ವೇಳೆ ಕೋರಿದರು. ಇದಕ್ಕೆ ಜೆಡಿಎಸ್‍ನ ಹಿರಿಯ ಸದಸ್ಯ ಶಿವಲಿಂಗೇಗೌಡ ಹಾಗೂ ಪಕ್ಷೇತರ ಸದಸ್ಯ ಎನ್. ಮಹೇಶ್ ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News