ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿ.16ಕ್ಕೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ: ಜಿ.ಆರ್.ಭಟ್
ಬೆಂಗಳೂರು, ಡಿ.13: ಖಾಸಗಿ ಶಾಲೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಡಿ.16 ರಂದು ಖಾಸಗಿ ಶಾಲೆಗಳ ವಿವಿಧ ಸಂಘಟನೆಗಳು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ಎಚ್ಚರಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಸುಳ್ಳು ಭರವಸೆಗಳನ್ನು ನೀಡಿ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿವೆ. ಕಳೆದ ಮಾರ್ಚ್‍ನಲ್ಲಿ ನಡೆದ ಖಾಸಗಿ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಮಾಡಲಾಯಿತು. ಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಶಿಕ್ಷಕ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದರು.ಆದರೆ ಆ ಭರವಸೆಗಳು ಇಂದಿಗೂ ಭರವಸೆಗಳಾಗಿಯೇ ಉಳಿದ ಕಾರಣ, ಖಾಸಗಿ ಶಾಲಾ ಶಿಕ್ಷಕರಿಗೆ ನೋವು ತಂದಿದೆ ಎಂದರು.
ಖಾಸಗಿ ಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ವಿಸ್ತರಿಸಬೇಕು. ಎನ್.ಪಿ.ಎಸ್. ಬದಲು ಓ.ಪಿ.ಎಸ್. ಜಾರಿಗೊಳಿಸಬೇಕು. ಖಾಸಗಿ ಶಾಲೆ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಆದ ನಷ್ಟ ಭರಿಸಬೇಕು ಎಂದ ಅವರು, ಈ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ, ಡಿ.16ರಂದು ಪ್ರತಿಭಟನೆ ಮಾಡಲಾಗುವುದು ಎಂದರು.