ಸರಕಾರಿ ಸೇವಾವಧಿಯಲ್ಲಿ ಖಾಸಗಿ ಆಸ್ಪತ್ರೆಗಳತ್ತ ತೆರಳುವ ವೈದ್ಯರ ವಿರುದ್ಧ ಕ್ರಮ: ಸಚಿವ ಡಾ.ಕೆ.ಸುಧಾಕರ್
ಬೆಳಗಾವಿ, ಡಿ.13: ಸರಕಾರಿ ವೈದ್ಯರು ನಿಗದಿತ ಕೆಲಸದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಕಾರ್ಯ ನಿರ್ವಹಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸೋಮವಾರ ಮೇಲ್ಮನೆಯ ಸದನದಲ್ಲಿ ಜರುಗಿದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ರಾಜ್ಯ ವ್ಯಾಪಿ ಸರಕಾರಿ ವೈದ್ಯರು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಆಸ್ಪತ್ರೆಯಲ್ಲೇ ಇರಬೇಕು. ಈ ಸಂಬಂಧ ನೂತನ ತಂತ್ರಜ್ಞಾನ ಪರಿಚಯಿಸಲಾಗುವುದು ಎಂದು ಹೇಳಿದರು.
ಕೆಲ ಸರಕಾರಿ ವೈದ್ಯರು ತಮ್ಮ ಸಮಯದಲ್ಲೇ ಖಾಸಗಿ ಆಸ್ಪತ್ರೆಗೆ ಹೋಗಿ ಕಾರ್ಯನಿರ್ವಹಿಸುವ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಜೊತೆಗೆ ಹೊಸ ನೀತಿಯನ್ನೇ ರೂಪಿಸಲಾಗುವುದು ಎಂದರು.
ಇದಕ್ಕೂ ಮೊದಲು ಪರಿಷತ್ತಿನ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಬಹುತೇಕ ಸರಕಾರಿ ವೈದ್ಯರು ತಮ್ಮ ಕುಟಂಬ ಸದಸ್ಯರ ಹೆಸರಿನಲ್ಲಿ ಪರವಾನಿಗೆ ಪಡೆದುಕೊಂಡು, ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವರು ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದಂತೆ ಇದ್ದು, ವೇತನ ಪಡೆಯುತ್ತಿದ್ದಾರೆ. ಆದರೆ, ಹೆಚ್ಚು ಸಮಯ ಅವರು ಖಾಸಗಿ ಆಸ್ಪತ್ರೆಯಲ್ಲೇ ಹೆಚ್ಚು ಇರುತ್ತಾರೆ ಎಂದರು.