ವಿಧಾನ ಪರಿಷತ್ ಚುನಾವಣೆ: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್ ಅರುಣ್ ಜಯಭೇರಿ
ಶಿವಮೊಗ್ಗ,ಡಿ.14: ರಾಜ್ಯದ ಗ್ರಾಮನ ಸೆಳೆದಿದ್ದ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ 2ನೇ ಸ್ಥಾನಗಳಿಸಿದ್ದಾರೆ.
ವಿಧಾನ ಪರಿಷತ್ ಮಾಜಿ ಸಭಾಪತಿ, ಬಿಜೆಪಿ ಹಿರಿಯ ನಾಯಕ ಡಿ.ಹೆಚ್. ಶಂಕರಮೂರ್ತಿ ಅವರ ಪುತ್ರ ಡಿ.ಎಸ್. ಅರುಣ್ ಮೊದಲ ಬಾರಿಗೆ ವಿಧಾನ ಪರಿಷತ್ ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎನ್ನುವ ಪರಿಪಾಠ ಈ ಚುನಾವಣೆಯಲ್ಲಿ ಮುಂದುವರೆದಿದೆ. ಇದರೊಂದಿಗೆ ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದ ಪರಿಪಾಠಕ್ಕೆ ಅರುಣ್ ಬ್ರೇಕ್ ಹಾಕಿದ್ದಾರೆ. ಯಾವುದೇ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿರದ ಅರುಣ್ ಎದುರಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ 2192 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ 1848 ಮತಗಳನ್ನು ಪಡೆದಿದ್ದಾರೆ. ಶಶಿಕುಮಾರ್ 3, ರವಿ 4 ಮತ ಪಡೆದಿದ್ದಾರೆ. ಸುಮಾರು 350 ಮತಗಳ ಅಂತರದಿಂದ ಡಿ.ಎಸ್. ಅರುಣ್ ಜಯಗಳಿಸಿದ್ದು, ಬಿಜೆಪಿ ಬೆಂಬಲಿಗರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿತ ಪ್ರಚಾರ ನಡೆಸಿದ್ದು, ಅರುಣ್ ಪರವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯರು ಹಾಗೂ ಶಾಸಕರು ಸೇರಿದಂತೆ ಪಕ್ಷದ ನಾಯಕರಿಂದ ಸಂಘಟಿತ ಪ್ರಚಾರ ನಡೆಸಲಾಗಿತ್ತು. ಆರ್. ಪ್ರಸನ್ನ ಕುಮಾರ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.
ತಮ್ಮ ಗೆಲುವಿಗೆ ಸಹಕರಿಸಿದ ಮತದಾರರು, ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಅರುಣ್ ಧನ್ಯವಾದ ಹೇಳಿದ್ದಾರೆ.
ಮೊದಲಿನಿಂದಲೂ ಗೆಲ್ಲುವ ವಿಶ್ವಾಸವಿತ್ತು. ನಮ್ಮ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರ ಶ್ರಮದಿಂದ ಗೆಲುವು ಸಿಕ್ಕಿದೆ. ನಮ್ಮ ಕೆಲಸಗಳು, ಸಂಘಟಿತ ಪ್ರಯತ್ನ, ಮತದಾರರ ಪರಿಶ್ರಮ ಗೆಲುವಿನ ಹಿಂದೆ ಇದೆ. ಈ ಗೆಲುವನ್ನು ಮತದಾರರು, ನಮ್ಮ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇನೆ.
ಬಿಜೆಪಿ ವಿಜೇತ ಅಭ್ಯರ್ಥಿ ಡಿ.ಎಸ್. ಅರುಣ್