×
Ad

ನನ್ನ ಮಾಹಿತಿ ಸುಳ್ಳೆಂದು ಸಾಬೀತುಪಡಿಸಿದರೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲೆ ಇರುವುದಿಲ್ಲ: ಸಿದ್ದರಾಮಯ್ಯ ಸವಾಲು

Update: 2021-12-14 21:50 IST

ಬೆಳಗಾವಿ, ಡಿ.14: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ರಾಜ್ಯದ ಬಡವರಿಗೆ ಒಂದೇ ಒಂದು ಮನೆಯನ್ನೂ ಕಟ್ಟಿಸಿ ಕೊಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದು, ಆಡಳಿತ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ಅಕಾಲಿಕ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ನಿಯಮ 69ರ ಅಡಿಯ ಚರ್ಚೆಯ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿದ ಸಿದ್ದರಾಮಯ್ಯ, ಸರಜಾರದ ವಿರುದ್ದ ವಾಗ್ದಾಳಿ ನಡೆಸಿದರು.

ನಮ್ಮ ಸರಕಾರದ ಅವಧಿಯಲ್ಲಿ ವಾರ್ಷಿಕ 5 ಲಕ್ಷದಂತೆ ಐದು ವರ್ಷದಲ್ಲಿ 15 ಲಕ್ಷ ಮನೆ ಮಂಜೂರು ಮಾಡಿದ್ದೇವು ಎಂದು ಸಿದ್ದರಾಮಯ್ಯ ಹೇಳಿದರು.

ಇದರಿಂದ ಕೆರಳಿದ ವಸತಿ ಸಚಿವ ವಿ.ಸೋಮಣ್ಣ, ಮನೆ ನೀಡುವ ಘೋಷಣೆ ಮಾಡಿದ್ದಿರಿ. ಆದರೆ, ಹಣ ಬಿಡುಗಡೆ ಆಗಿಲ್ಲ. ನಮ್ಮ ಸರಕಾರ ಬಂದ ಮೇಲೆ 3ಸಾವಿರ ಕೋಟಿ ರೂ.ಹಣ ಬಿಡುಗಡೆ ಮಾಡಿದ್ದೇವೆ ಎಂದು ಸಮರ್ಥಿಸಿದರು.

ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, ನೀವು ಮಂಜೂರು ಮಾಡಿರುವ ಮನೆಗಳ ಬಗ್ಗೆ ಆದೇಶ ತೋರಿಸಿ ಎಂದು ಸವಾಲು ಹಾಕಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಸತಿ ಸಚಿವ ವಿ.‌ಸೋಮಣ್ಣ, ಸುಳ್ಳು ನೂರು ಸಲ‌ ಹೇಳಿದರೆ ನಿಜ ಆಗುತ್ತೆ. ಸಿದ್ದರಾಮಯ್ಯ ಅವಧಿಯಲ್ಲಿ ಆಗಿರುವ ಮನೆಗಳ ಪೈಕಿ ಕೆಲವು ಬಿಜೆಪಿ ಅವಧಿಯಲ್ಲಿ ಮಂಜೂರಾಗಿದ್ದು ಎಂದು ಹೇಳಿದರು.

ನಾನು ಎಲ್ಲ ದಾಖಲೆಗಳು, ನಾನೇ ಬಜೆಟ್ ಮಂಡಿಸಿದ ಪುಸ್ತಕ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಹೇಳುತ್ತಿದ್ದೇನೆ. ನಾನು ನೀಡಿದ ಮಾಹಿತಿ ತಪ್ಪು ಎಂದು ಸಾಬೀತುಮಾಡಿದರೆ ನಾನು ಪ್ರತಿಪಕ್ಷ ನಾಯಕನ ಸ್ಥಾನದಲ್ಲೆ ಇರುವುದಿಲ್ಲ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಇದಕ್ಕೆ ಉತ್ತರಿಸಿದ ಸೋಮಣ್ಣ ನಾಳೆ ಎಲ್ಲ ದಾಖಲೆ ನೀಡುವೆ ಎಂದರು. ಬಳಿಕ ಸಿದ್ದರಾಮಯ್ಯ ಬೇರೆ ವಿಷಯದ ಬಗ್ಗೆ ತಮ್ಮ ಮಾತು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News