ಪೊಲೀಸ್ ಸಿಬ್ಬಂದಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಳಗಾವಿ, ಡಿ. 14: ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ಠಾಣೆ ಕಟ್ಟಡ ಮತ್ತು ವಸತಿ ಗೃಹಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಮೂಲಕ ಪೊಲೀಸರಿಗೆ ಸೂಕ್ತ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸ್ಪೀಕರ್ ಕಾಗೇರಿ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡುವ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್, ಪೊಲೀಸ್ ಗೃಹ ನಿರ್ಮಾಣ ಪ್ರಾಧಿಕಾರಿ ಗುಣಮಟ್ಟದ ಕಟ್ಟಡ ನಿರ್ಮಿಸುತ್ತಿಲ್ಲ. ಅಲ್ಲದೆ, ಪೊಲೀಸ್ ವಸತಿ ಗೃಹಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ತಮಗೆ ಸೌಲಭ್ಯಗಳಿಲ್ಲದಿರುವ ಸಿಟ್ಟನ್ನು ಜನರ ಮೇಲೆ ತೀರಿಸಿಕೊಳ್ಳುವಂತೆ ಆಗುತ್ತಿದೆ. ಹೀಗಾಗಿ ಅವರಿಗೆ ನೆಮ್ಮದಿಯಿಂದ ಕೆಲಸ ಮಾಡುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಮುದುಕಿಗೆ ಶೃಂಗಾರ: ಹಳೆಯ ಕಟ್ಟಡಗಳನ್ನು ಸರಕಾರ ಮುದುಕಿಗೆ ಶೃಂಗಾರ ಮಾಡಿದಂತೆ ಮಾಡುತ್ತಿದೆ. ಇದರಿಂದ ಹಣ ಪೋಲಾಗುತ್ತಿದೆ. ಅದರ ಬದಲು ಅದೇ ಹಣದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು. ಅಲ್ಲದೆ, ಸಿಬ್ಬಂದಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಶಿವಲಿಂಗೇಗೌಡ ಆಗ್ರಹಿಸಿದರು.
10 ಸಾವಿರ ವಸತಿ ಗೃಹ, 100 ಹೊಸ ಪೊಲೀಸ್ ಠಾಣೆ: ರಾಜ್ಯದಲ್ಲಿ ಪ್ರಸಕ್ತ ವರ್ಷ 100 ಹೊಸ ಪೊಲೀಸ್ ಠಾಣೆಗಳನ್ನು ಹಾಗೂ 10 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಅಲ್ಲದೆ, ಕೆಲವು ಕಡೆ ಠಾಣೆಗಳನ್ನು ಲಕ್ಷಾಂತರ ರೂ.ಖರ್ಚು ಮಾಡಿ ದುರಸ್ತಿ ಮಾಡಿದರೂ ಯಾವುದೇ ಉಪಯೋಗವಾಗುತ್ತಿಲ್ಲ. ಹೀಗಾಗಿ ಆಧುನಿಕ ಸೌಲಭ್ಯವುಳ್ಳ ಕಟ್ಟಡಗಳನ್ನು ನಿರ್ಮಾಣ ಮಾಡುತ್ತೇವೆ. ಸಿಬ್ಬಂದಿ ಗೌರವದಿಂದ ಕೆಲಸ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದರು.