4 ಸಾವಿರ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ 3.60 ಲಕ್ಷಕ್ಕೂ ಅಧಿಕ ಅರ್ಜಿ: ಆರಗ ಜ್ಞಾನೇಂದ್ರ

Update: 2021-12-14 17:28 GMT

ಬೆಳಗಾವಿ, ಡಿ. 14: ರಾಜ್ಯದಲ್ಲಿ 4ಸಾವಿರ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು 3.60 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ, ಕರಾವಳಿ ಭಾಗದಿಂದ ಕೇವಲ 100 ಅರ್ಜಿಗಳಷ್ಟೇ ಬಂದಿದ್ದು, ಆ ಪ್ರದೇಶದ ಯುವಕ-ಯುವತಿಯರಿಂದ ಅರ್ಜಿ ಹಾಕಿಸಲು ಆ ಭಾಗದ ಶಾಸಕರು ಶ್ರಮಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಸಂಜೀವ ವಠಂದೂರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕರಾವಳಿ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳಿಯ ಜನರು ಪೊಲೀಸ್ ಇಲಾಖೆ ಕೆಲಸಕ್ಕೆ ಬರುತ್ತಿಲ್ಲ. ತುಳು ಭಾಷೆ ಸಹಿತ ಸ್ಥಳೀಯ ಭಾಷೆ ಬಲ್ಲವರ ಅಗತ್ಯವಿದೆ ಎಂದು ಹೇಳಿದರು.

ಸ್ಥಳಾಂತರಕ್ಕೆ ಪರಿಶೀಲನೆ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿನ ಸಹಾಯಕ ಪೊಲೀಸ್ ಅಧೀಕ್ಷಕರ(ಎಸ್ಪಿ) ಕಚೇರಿಯನ್ನು ಸ್ಥಳಾಂತರಿಸುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಪೊಲೀಸ್ ಕಾನ್‍ಸ್ಟೇಬಲ್ ಸಿವಿಲ್ ಮತ್ತು ಸಶಸ್ತ್ರ ಹುದ್ದೆಗಳಿಗೆ ಜಿಲ್ಲಾವಾರು ಅಧಿಸೂಚನೆ ಹೊರಡಿಸಿ ಲಿಖಿತ/ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ/ವೈದ್ಯಕೀಯ ಪರೀಕ್ಷೆ ನಂತರ ಅಂತಿಮ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. 

ಅವರಿಗೆ ಅಲ್ಲೇನು ಕೆಲಸ: ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕ್ಷಕರಿಗೆ(ಎಸ್ಪಿ) ಏನು ಕೆಲಸ. ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಕೂಡಲೇ ಅಧೀಕ್ಷಕರ ಕಚೇರಿಯಲ್ಲಿ ಪುತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ಸದಸ್ಯ ಪಿ.ರಾಜೀವ್ ಸಲಹೆ ಮಾಡಿದರು.

Similar News