ಮೈಸೂರು ಲ್ಯಾಂಪ್ ಭೂಮಿ ಖಾಸಗೀಕರಣವಿಲ್ಲ: ಸಚಿವ ಮುರುಗೇಶ್ ನಿರಾಣಿ

Update: 2021-12-14 17:45 GMT

ಬೆಳಗಾವಿ ಸುವರ್ಣಸೌಧ, ಡಿ.14: ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಯಾವುದೇ ಭೂಮಿಯನ್ನು ಖಾಸಗಿ ಸಂಸ್ಥೆಗೆ ಪರಭಾರೆ ಮಾಡುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕಾಂತರಾಜು ಅವರ  ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಲು ನಗರದ ಹೃದಯಭಾಗದಲ್ಲಿರುವ ಜಾಗವನ್ನು ಸಂರಕ್ಷಿಸಲು ‘ಬೆಂಗಳೂರು ಅನುಭವ' ಎಂಬ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಎಂದು ಹೇಳಿದರು.

ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವಕ್ರ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಪ್ರಸ್ತಾವನೆ ಇಲ್ಲ ಎಂದ ಅವರು, ಇಲ್ಲಿ ‘ಬೆಂಗಳೂರು ಎಕ್ಸ್‍ಪೀರಿಯನ್ಸ್ ಪ್ರಾಜೆಕ್ಟ್' ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದರು.

ಭೂಮಿಯನ್ನು ಟ್ರಸ್ಟ್‍ಗೆ ಬಾಡಿಗೆಗೆ ನೀಡುವುದಿಲ್ಲ. "ಬೆಂಗಳೂರು ಪರಂಪರೆ ಮತ್ತು ಪರಿಸರ ಟ್ರಸ್ಟ್” ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು ನೋಂದಾಯಿಸಲಾಗಿದೆ ಎಂದ ಅವರು, ಇದಕ್ಕಾಗಿ ಐವರು ನಾಗರಿಕರನ್ನು ಟ್ರಸ್ಟಿಗಳಾಗಿ ನೇಮಿಸಲಾಗುತ್ತದೆ. ಅವರ ಅನುಭವ ಮತ್ತು ಸೇವೆಯನ್ನು ಬೆಂಗಳೂರು ನಗರದ ಹಸಿರು ಸಂರಕ್ಷಿಸುವ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ಮತ್ತು ಇಬ್ಬರು ಟ್ರಸ್ಟಿಗಳನ್ನು ಈಗಾಗಲೇ ಹೆಸರಿಸಲಾಗಿದೆ ಎಂದು ನಿರಾಣಿ ಸ್ಪಷ್ಟಪಡಿಸಿದರು.

ಮತ್ತೊಂದೆಡೆ ಬೆಂಗಳೂರು ಪರಂಪರೆ ಮತ್ತು ಪರಿಸರ ಟ್ರಸ್ಟ್ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಮುಖ್ಯ ಕಾರ್ಯದರ್ಶಿ ಟ್ರಸ್ಟ್‍ನ ಮುಖ್ಯಸ್ಥರನ್ನಾಗಿ ಮಾಡಲು ತಿದ್ದುಪಡಿಗಳನ್ನು ಮಾಡಲಾಗುವುದು ಭರವಸೆ ನೀಡಿದರು.

ಸಚಿವರ ಉತ್ತರದ ಬಳಿಕ ಪ್ರತಿಕ್ರಿಯಿಸಿದ ಕಾಂತರಾಜ್, ಈ ಟ್ರಸ್ಟ್‍ನಲ್ಲಿ ಸ್ಥಳೀಯ ಜನ ಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸಬೇಕು. ಜೊತೆಗೆ, ಈಗಾಗಲೇ ಬೆಂಗಳೂರು ವಾಯು ಮಾಲಿನ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ, ಬೇರೆ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಾಗಲಿ ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ತಿಪ್ಪೇಸ್ವಾಮಿ ಮಾತನಾಡಿ, ಇಂತಹ ಚಾರಿಟಬಲ್ ಟ್ರಸ್ಟ್ ಏಕೆ. ವಂಚನೆ ಆದರೆ ಯಾರು ಹೊಣೆ? ಈ ವಿಚಾರಕ್ಕಾಗಿ ಚರ್ಚೆಗೆ ಅರ್ಧ ಗಂಟೆ ಅವಕಾಶ ನೀಡಿ ಎಂದು ಬೇಡಿಕೆಯಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News