ಸಚಿವ ಮಾಧುಸ್ವಾಮಿಯನ್ನು ಮುಜುಗರಕ್ಕೆ ಸಿಲುಕಿಸಿದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್
ಬೆಳಗಾವಿ, ಡಿ. 14: ಸಣ್ಣ ನೀರಾವರಿ ಇಲಾಖೆಗೆ ಅನುದಾನ ಲಭ್ಯಯಾವಾಗ ಆಗುತ್ತದೆ ಮತ್ತು ಕಾಮಗಾರಿಯನ್ನು ಯಾವಾಗ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಆಡಳಿತ ಪಕ್ಷದ ಸದಸ್ಯ ಬೆಳ್ಳಿ ಪ್ರಕಾಶ್ ಪ್ರಶ್ನಿಸುವ ಮೂಲಕ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಮುಜುಗರ ಸೃಷ್ಟಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪರವಾಗಿ ಪ್ರಶ್ನೆ ಕೇಳಿದ ಸದಸ್ಯ ಬೆಳ್ಳಿ ಪ್ರಕಾಶ್, ಅನುದಾನ ಲಭ್ಯತೆ ಯಾವಾಗ ಲಭ್ಯವಾಗಲಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ಕ್ರಿಯಾ ಯೋಜನೆ ಅಲ್ಲದೆ, ದಿಢೀರ್ ಆಗಿ ಬರುವ ಕಾಮಗಾರಿಗಳಿಗೆ ಏಕಾಏಕಿ ಅನುದಾನ ಲಭ್ಯತೆ ಒದಗಿಸುವುದು ಹೇಗೇ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ ರಿಸರ್ವ್ ಬ್ಯಾಂಕ್ ಆನ್ನು ಕೇಳಬೇಕು ಎಂದರು. ಈ ಹಂತದಲ್ಲಿ ಎದ್ದು ನಿಂತ ಕಾಂಗ್ರೆಸ್‍ನ ಕೃಷ್ಣ ಭೈರೇಗೌಡ, ಸಚಿವರು ತಮ್ಮ ಇತಿಮಿತಿಯಲ್ಲಿ ಹೇಳುತ್ತಾರೆ. ಯಾವುದನ್ನು ಅರ್ಥ ಮಾಡಿಕೊಳ್ಳಬೇಕು. ಸರಕಾರದಲ್ಲಿ ಹಣವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕೋ ಅಥವಾ ಸರಕಾರದಲ್ಲಿ ಹಣವಿದ್ದರೂ ಸಣ್ಣ ನೀರಾವರಿ ಇಲಾಖೆಗೆ ಇಲ್ಲ ಎಂದು ತಿಳಿದುಕೊಳ್ಳಬೇಕೋ? ವಾಗ್ಬಾಣ ಬಿಟ್ಟರು.
ಇದರಿಂದ ತೀವ್ರ ಮುಜುಗರಕ್ಕೊಳಗಾದ ಮಾಧುಸ್ವಾಮಿ, ನನ್ನ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯವರು ಸೂಕ್ತ ರೀತಿಯಲ್ಲಿ ಅನುದಾನ ನೀಡಿದ್ದಾರೆ. ಆದರೆ, ಸದಸ್ಯ ಸಿ.ಟಿ.ರವಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದರು.