×
Ad

ಕಾಂಗ್ರೆಸ್ ನ 15 ಮಂದಿ ವಿಧಾನ ಪರಿಷತ್ ಸದಸ್ಯರ ಅಮಾನತು

Update: 2021-12-15 16:06 IST

ಬೆಳಗಾವಿ, ಡಿ.15: ಭೂ ಕಬಳಿಕೆ ಆರೋಪ ಸಂಬಂಧ ಸಚಿವ ಬೈರತಿ ಬಸವರಾಜ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನ್ಯಾಯಾಲಯ ಆದೇಶಿಸಿರುವ  ವಿಚಾರವಾಗಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿನ 15 ಮಂದಿ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ಅನ್ವಯ ಅಮಾನತು ಪಡಿಸಲಾಗಿದೆ.

ಬುಧವಾರ ಪರಿಷತ್ತಿನ ಕಲಾಪದ ವೇಳೆ ಸಚಿವರ ರಾಜೀನಾಮೆ ವಿಚಾರ ಕೋರಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸದಸ್ಯ ಎಂ.ನಾರಾಯಣ ಸ್ವಾಮಿ ಅವರು ನಿಲುವಳಿ ಮಂಡಿಸಿ, ನಿಯಮ 59ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದರು.

ಆದರೆ ನಿಲುವಳಿಯನ್ನು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕಾರ ಮಾಡಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ವಿ.ಸೋಮಣ್ಣ, ಸಭಾಪತಿ ಈಗಾಗಲೇ ರೂಲಿಂಗ್ ನೀಡಿದ್ದಾರೆ. ಸದನ ಉತ್ತಮವಾಗಿ ನಡೆಸಬೇಕು. ಕೋರ್ಟ್‍ನಲ್ಲಿರುವ ಪ್ರಕರಣ ಇಲ್ಲಿ ಚರ್ಚೆ ಮಾಡಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಸದನ ನಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಬಳಿಕ ಸಭಾನಾಯಕ ಶ್ರೀನಿವಾಸ ಪೂಜಾರಿ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಪ್ರಶ್ನಿಸಲಾಗಿದೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು ಎಂದರು.

ತದನಂತರ ಸಭಾಪತಿ ಬಸವರಾಜ ಹೊರಟ್ಟಿ, ಸದನ ಬಾವಿಯಲ್ಲಿರುವ ಸದಸ್ಯರನ್ನು ಒಂದು ದಿನ ಮಟ್ಟಿಗೆ ಅಮಾನತು ಮಾಡಿ ಆದೇಶ ಮಾಡಿ ಪೀಠದಿಂದ ನಿರ್ಗಮಿಸಿದರು.

ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ ಪ್ರತಿಭಟನಾ ನಿರತ ಸದಸ್ಯರ ಮನವೊಲಿಸಲು ಪ್ರಯತ್ನ ಮಾಡಿದರು. ಆದರೂ, ಕಾಂಗ್ರೆಸ್ ಸದಸ್ಯರು ತಮ್ಮ ಧರಣಿಯನ್ನು ಮುಂದುವರಿಸಿದ್ದರಿಂದ 15 ಸದಸ್ಯರನ್ನು ಒಂದು ದಿನದ ಮಟ್ಟಿಗೆ ಸಭಾಪತಿಯ ಆದೇಶದನ್ವಯ ಅಮಾನತು ಮಾಡಲಾಗುತ್ತಿದೆ ಎಂದು ಸದಸ್ಯರ ಹೆಸರು ಪ್ರಕಟಿಸಿದರು.

ಧರಣಿಗೂ ಮೊದಲು, ಬಿಜೆಪಿ ಸಚಿವರೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ರೂಲಿಂಗ್ ನೀಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ಹಕ್ಕು ಬಾಧ್ಯತಾ ಸಮಿತಿಯ 98ನೇ ವರದಿ ಮಂಡನೆ ಬಳಿಕ ನಿಲುವಳಿ ಸೂಚನೆ ಮಂಡಿಸಿದ ನಾರಾಯಣಸ್ವಾಮಿ, ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಆರ್.ಶಂಕರ್ ಮೇಲೆ ಭೂಕಬಳಿಕೆ ಆರೋಪ ಸಂಬಂಧ ಐಪಿಸಿ ಸೆಕ್ಷನ್ 420 ಸೇರಿದಂತೆ ಇನ್ನಿತರ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ಹೀಗಾಗಿ, ಸಚಿವರೂ, ಸರಕಾರವೂ ರಾಜೀನಾಮೆ ನೀಡಬೇಕು ಎಂದು ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದರು.

ಈ ವೇಳೆ ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿ ಬೇಡಿಕೆಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣ ಕುರಿತು ಸದನದಲ್ಲಿ ಚರ್ಚಿಸಲು ಬರುವುದಿಲ್ಲ. ಹಾಗಾಗಿ, ನಿಲುವಳಿ ಸೂಚನೆ ಮಂಡನೆ ಮಾಡುವುದೇ ಸರಿಯಲ್ಲ. ಇದಕ್ಕೆ ಅವಕಾಶ ನೀಡಬಾರದೆಂದು ಹೇಳಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್, ನಿಯಮಾವಳಿಯ ಪುಸ್ತಕದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಚರ್ಚೆಗೆ ಅವಕಾಶ ಕಲ್ಪಿಸುವ ಅವಕಾಶವಿರುವ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

ಬಳಿಕ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಚಿವರೊಬ್ಬರ ವಿರುದ್ಧ ಆರೋಪವಿದೆ. ಆದರೆ, ಅವರನ್ನು ನಾವು ಯಾರೂ ಅಪರಾಧಿ ಎನ್ನುವುದಿಲ್ಲ. ಆರೋಪಿಯಷ್ಟೇ  ಆದರೆ, ನ್ಯಾಯಾಧೀಶರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿರುವುದರಿಂದ ಸೀಮಿತ ಪರಿದಿಯಲ್ಲಿ ಸಚಿವರ ವಿರುದ್ಧದ ಆರೋಪ ಕುರಿತು ಚರ್ಚಿಸಲು ಅವಕಾಶ ನೀಡಬೇಕು. ನೈತಿಕ ಕಾರಣಕ್ಕಾಗಿ ಅವಕಾಶ ನೀಡಿ ಎಂದರು.

ಪ್ರತಿಪಕ್ಷದ ನಿಲುವಳಿ ಸೂಚನೆ ಕುರಿತು ಪರ-ವಿರುದ್ಧದ ಹೇಳಿಕೆಗಳನ್ನು ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪ ನಿಯಮಾವಳಿ ಕಲಂ 62ರ ಪ್ರಕಾರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳ ವಿಷಯದ ಮೇಲೆ ಚರ್ಚೆಗೆ ಅವಕಾಶ ನೀಡುವಂತಿಲ್ಲ. ಹಾಗಾಗಿ, ಕಾಂಗ್ರೆಸ್‍ನ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ರೂಲಿಂಗ್ ನೀಡಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ಪರಿಷತ್ ನಲ್ಲಿ ಸಚಿವ ಬೈರತಿ ಬಸವರಾಜ ರಾಜೀನಾಮೆಗೆ ಒತ್ತಾಯ

 ಭೂ ಕಬಳಿಕೆ ಆರೋಪ ಹೊತ್ತಿರುವ ಸಚಿವ ಭೈರತಿ ಬಸವರಾಜ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕೆಂದು ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಒತ್ತಾಯಿಸಿದರು.

ಬುಧವಾರ ಸುವರ್ಣವಿಧಾನಸೌಧದಲ್ಲಿ ಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಪಿ.ಆರ್.ರಮೇಶ್ ಜತೆ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೆಆರ್ ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಣ್ಣಯ್ಯಪ್ಪ ಮತ್ತು ಇತರರಿಗೆ ಸೇರಿದ ಜಮೀನನ್ನು ನಕಲಿ ದಾಖಲೆ ಮಾಡಿರುವುದಲ್ಲದೆ, ನಕಲಿ ಮಾಲಕರನ್ನು ಸೃಷ್ಟಿಸಿ ಅವರಿಂದ ಕಚೇರಿಯಲ್ಲಿ ನೋಂದಾವಣೆ ಮಾಡಿಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಎಂದು ತೀರ್ಮಾನಿಸಿ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಆರ್.ಶಂಕರ್ ಮತ್ತು ಇತರ ಮೂರು ಮಂದಿಯನ್ನು ಆರೋಪಿಗಳು ಎಂದು ತೀರ್ಮಾನಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಎಂದರು.

ಅಮಾನತುಗೊಂಡ ಸದಸ್ಯರು

ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಸಚೇತಕ ಎಂ.ನಾರಾಯಣಸ್ವಾಮಿ, ಸದಸ್ಯರಾದ ಪಿ.ಆರ್.ರಮೇಶ್, ಬಿ.ಕೆ. ಹರಿಪ್ರಸಾದ್, ಪ್ರತಾಪ್‍ಚಂದ್ರಶೆಟ್ಟಿ, ಯು.ಬಿ.ವೆಂಕಟೇಶ್, ವೀಣಾ ಅಚ್ಚಯ್ಯ, ಸಿ.ಎಂ.ಇಬ್ರಾಹಿಮ್, ಹರೀಶ್ ಕುಮಾರ್, ನಸೀರ್ ಅಹ್ಮದ್, ಆರ್.ಬಿ.ತಿಮ್ಮಾಪೂರ್, ಬಸವರಾಜ್ ಪಾಟೀಲ್ ಇಟಗಿ, ಗೋಪಾಲಸ್ವಾಮಿ, ಅರವಿಂದ ಕುಮಾರ್ ಅರಳಿ, ಸಿ.ಎಂ. ಲಿಂಗಪ್ಪ ಅವರನ್ನು ಒಂದು ದಿನದ ಅವಧಿಗೆ ಅಮಾನತುಗೊಳಿಸಲಾಯಿತು.

ಆದೇಶದಲ್ಲಿ ಏನಿದೆ?

ಈ ಸದನದಲ್ಲಿ ವಿನಾಕಾರಣ ಸಭಾಪತಿ ಅವರ ಅಧಿಕಾರದ ವಿಷಯದಲ್ಲಿ ಲಕ್ಷ್ಯವಿಲ್ಲದೆ, 15 ಸದಸ್ಯರು ತಿರಸ್ಕಾರದಿಂದ ವರ್ತನೆ ಮಾಡುತ್ತಿದ್ದಾರೆ. ಮತ್ತು ಪರಿಷತ್ತಿನ ಕಾರ್ಯ ಕಲಾಪಗಳಿಗೆ ಒಂದೇ ಸಮ ಉದ್ದೇಶಪೂರ್ವಕವಾಗಿ ಅಡಚಣೆ ಉಂಟು ಮಾಡುವ ಮೂಲಕ ಪರಿಷತ್ತಿನ ನಿಯಮಗಳಿಗೆ ವಿರೋಧವಾಗಿ ವರ್ತಿಸುತ್ತಿದ್ದಾರೆ.

ಆದ್ದರಿಂದ ಸದಸ್ಯರನ್ನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡುವಳಿಕೆ ನಿಯಮ 327(1) ಮತ್ತು 2ರ ಅನ್ವಯ ಈ ದಿನದ ಕಾರ್ಯ ಕಲಾಪದಲ್ಲಿ ಪಾಲ್ಗೊಳ್ಳದಂತೆ ಹಾಗೂ ಸಭೆಯಿಂದ ಹೊರ ಉಳಿಯುವಂತೆ ಆಜ್ಞೆ ಮಾಡುತ್ತೇನೆ ಎಂದು ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News