ನಾನು ಏನು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತು: ರಮೇಶ್ ಜಾರಕಿಹೊಳಿಗೆ ಸಿದ್ದರಾಮಯ್ಯ ತಿರುಗೇಟು
Update: 2021-12-15 19:13 IST
ಬೆಳಗಾವಿ, ಡಿ.15: ತಮ್ಮನ್ನು ‘ವೇಸ್ಟ್ ಬಾಡಿ’ ಎಂದು ಕರೆದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜಕೀಯ ಭಾಷೆ, ಸಂಸ್ಕೃತಿ ಗೊತ್ತಿಲ್ಲದವರ ಮಾತುಗಳಿಗೆಲ್ಲ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.
ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬಂದು 50 ವರ್ಷ ಆಯಿತು. ಇಂತಹ ಬಹಳಷ್ಟು ಮಂದಿಯನ್ನು ನೋಡಿದ್ದೇನೆ. ಮೊನ್ನೆಯಷ್ಟೆ ನನ್ನನ್ನು ಗುರು ಅಂತಾರೆ, ಈಗ ಹೀಗೆ ಹೇಳುತ್ತಿದ್ದಾರೆ. ಇವರ ಮಾತುಗಳಿಗೆ ಏನು ಕಿಮ್ಮತ್ತು ಇರುತ್ತೆ ಹೇಳಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಏನು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತು. ಯಾರೋ ಒಬ್ಬರು ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೆ ಅವರಿಗೆಲ್ಲ ಉತ್ತರ ಕೊಡಬೇಕಾ? ಟೀಕೆ ಮಾಡೋರನ್ನ ನಾನು ಬಹಳ ಜನರನ್ನು ನೋಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.