×
Ad

ಭೂ ಕಬಳಿಕೆ ಆರೋಪ: ಪರಿಷತ್ ನಲ್ಲಿ ಸಚಿವ ಬೈರತಿ ಬಸವರಾಜ ರಾಜೀನಾಮೆಗೆ ಒತ್ತಾಯ

Update: 2021-12-15 19:32 IST

ಬೆಳಗಾವಿ, ಡಿ.15: ಭೂ ಕಬಳಿಕೆ ಆರೋಪ ಹೊತ್ತಿರುವ ಸಚಿವ ಭೈರತಿ ಬಸವರಾಜ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕೆಂದು ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಒತ್ತಾಯಿಸಿದರು.

ಬುಧವಾರ ಸುವರ್ಣವಿಧಾನಸೌಧದಲ್ಲಿ ಪರಿಷತ್ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಪಿ.ಆರ್.ರಮೇಶ್ ಜತೆ ಜಂಟಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕೆಆರ್‍ಪುರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಣ್ಣಯ್ಯಪ್ಪ ಮತ್ತು ಇತರರಿಗೆ ಸೇರಿದ ಜಮೀನನ್ನು ನಕಲಿ ದಾಖಲೆ ಮಾಡಿರುವುದಲ್ಲದೆ, ನಕಲಿ ಮಾಲಕರನ್ನು ಸೃಷ್ಟಿಸಿ ಅವರಿಂದ ಕಚೇರಿಯಲ್ಲಿ ನೋಂದಾವಣೆ ಮಾಡಿಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಎಂದು ತೀರ್ಮಾನಿಸಿ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಚಿವ ಬೈರತಿ ಬಸವರಾಜ, ಮಾಜಿ ಸಚಿವ ಆರ್.ಶಂಕರ್ ಮತ್ತು ಇತರ ಮೂರು ಮಂದಿಯನ್ನು ಆರೋಪಿಗಳು ಎಂದು ತೀರ್ಮಾನಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಎಂದರು.

ಈ ಮಹತ್ವದ ತೀರ್ಪನ್ನು ಕೋರ್ಟ್ ನೀಡಿರುವ ಹಿನ್ನೆಲೆ ಸರಕಾರ ಕೂಡಲೇ ಸಚಿವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಕಾಂಗ್ರೆಸ್ ಈ ವಿಚಾರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಸುಮ್ಮನಿರುವುದಿಲ್ಲ. ಪಕ್ಷದ ನಾಯಕರ ಜತೆ ಚರ್ಚಿಸಿ ಒಂದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News